ನ್ಯೂಸ್

ವೇಗಕ್ಕೆ ಬ್ರೇಕ್ ಹಾಕಿ, ನಿಧಾನವೇ ಪ್ರಧಾನ

vijayavani

ದಾವಣಗೆರೆ: ವಚನಾನಂದ ಸ್ವಾಮೀಜಿ ವೇಗವಾಗಿ ಚಲಿಸುತ್ತಿದ್ದಾರೆ. ಅಷ್ಟೊಂದು ವೇಗ ಒಳ್ಳೆಯದಲ್ಲ. ಅವಸರ ಅಪಘಾತಕ್ಕೆ ಕಾರಣ ಆಗಬಹುದು. ನಿಧಾನವಾಗಿ ಸಾಗಿ ಎಂದು ಸ್ವಾಮೀಜಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು. ಸಮುದಾಯಕ್ಕೆ ಸಚಿವಗಿರಿ ಕೇಳುವ ಭರದಲ್ಲಿ ಸಿಎಂಗೆ ಅವಮಾನ ಆಗುವ ಧಾಟಿಯಲ್ಲಿ ಮಾತನಾಡಿದ್ದ ವಚನಾನಂದ ಸ್ವಾಮೀಜಿ ನಡೆಯನ್ನು ಗಮನದಲ್ಲಿಟ್ಟುಕೊಂಡು ಶಾಮನೂರು ಅವರು, ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಹಾಗೂ ಹರ ಜಾತ್ರೆಗೆ ಶ್ರಮಿಸಿದವರಿಗೆ ಹರಿಹರದ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಕೃತಜ್ಞತಾ ಕಾರ್ಯಕ್ರಮ ವೇಳೆ ಈ ಮಾತು ಹೇಳಿದರು.

ಸಮಾಜದ ಕೆಲಸ ಆಗಬೇಕಿದ್ದರೆ ಸರ್ಕಾರದ ಬೆನ್ನುತಟ್ಟಿ ಮಾಡಿಸಿಕೊಳ್ಳಬೇಕೇ ಹೊರತು ಸರ್ಕಾರದ ವಿರುದ್ಧ ಹೋಗಬಾರದು ಎಂದರು. ಬಿ.ಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತ ಸಮಾಜದ ಆಶಾಕಿರಣ. ಬಿಎಸ್​ವೈ ನಮ್ಮವರೇ. ಸಿಎಂ ಆಗಿ ಮಠ-ಮಾನ್ಯಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಮಠಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿ ಆಗಿವೆ ಗೊತ್ತಿಲ್ಲ. ನಾನಿವತ್ತು ವೀರಶೈವ ಮಹಾಸಭಾ ಅಧ್ಯಕ್ಷನಾಗಿ ಮರು ಆಯ್ಕೆ ಆಗಿದ್ದರೆ ಅದಕ್ಕೆ ಬಿಎಸ್​ವೈ ಕೂಡ ಕಾರಣ. ಅವರು ಬೆಂಬಲ ನೀಡಿ ಧೈರ್ಯ ಹೇಳಿದ್ದರಿಂದಲೇ ಈ ಹುದ್ದೆ ಅಲಂಕರಿಸಿದ್ದೇನೆ ಎಂದು ತಿಳಿಸಿದರು. ಪಂಚಮಸಾಲಿ, ನೊಣಬರು, ಬಣಜಿಗರು ಸೇರಿ ಎಲ್ಲರೂ ಒಗ್ಗೂಡಿದರೆ ವೀರಶೈವ ಲಿಂಗಾಯತ ಸಮಾಜ ಸಬಲ ಆಗಲಿದೆ ಎಂದರು.

ತಪ್ಪೊಪ್ಪಿಕೊಳ್ಳದ ವಚನಾನಂದ ಶ್ರೀ: ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ‘ನಮಗೇನು ಸಂಸಾರ ಇದೆಯೆ? ನಾವು ಕೋಪ ಪ್ರದರ್ಶಿಸಿದ್ದರೆ ಅದು ಸಮಾಜದ ಸಲುವಾಗಿ’ ಮಾತ್ರ ಎಂದು ಅಂದಿನ ಘಟನೆಯನ್ನು ಸಮರ್ಥಿಸಿಕೊಂಡರು. ಮಗುವಿಗೆ ಉಣಿಸುವಾಗ ತಾಯಿ ಕಟ್ಟಿಗೆ ತೋರಿಸುತ್ತಾಳೆ. ಇದರರ್ಥ ಮಗು ಊಟ ಮಾಡಲಿ ಎಂದು ಹೇಳಿದರು.

ಯಡಿಯೂರಪ್ಪ ಅವರಿಂದಾಗಿ ದಾವಣಗೆರೆ ಯಲ್ಲಿ ವಿರಶೈವ ಲಿಂಗಾಯತ ಅಧಿಕಾರಿಗಳನ್ನು ಕಂಡಿ ದ್ದೇವೆ. ಈ ಹಿಂದೆ ನಮ್ಮ ಸಮುದಾಯದವರು ಇರಲಿಲ್ಲ. | ಡಾ.ಶಾಮನೂರು ಶಿವಶಂಕರಪ್ಪ ಶಾಸಕ