ನ್ಯೂಸ್

ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬ ಆಚರಣೆಗೆ ಬ್ರೇಕ್

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸದಂತೆ ಸೂಚನೆ ನೀಡಿದೆ. ಒಂದು ವೇಳೆ ಆಚರಿಸುವುದು ಕಂಡುಬಂದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲ ವಸತಿ ಶಾಲೆ ಕಾಲೇಜುಗಳಲ್ಲಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಣೆ ಮಾಡಬೇಕಾಗಿರುತ್ತದೆ. ಆದರೆ, ಕೆಲವು ರಾಷ್ಟ್ರೀಯ ಹಬ್ಬಗಳನ್ನು ಮಾತ್ರವಲ್ಲದೆ, ಇತರೆ ಧಾರ್ಮಿಕ ಹಬ್ಬಗಳಾದ ಯುಗಾದಿ, ರಂಜಾನ್, ಕ್ರಿಸ್‌ಮಸ್, ಈದ್ ಮಿಲಾದ್, ಸಂಕ್ರಾಂತಿ ಸೇರಿ ಇತರೆ ಹಬ್ಬಗಳನ್ನು ಆಚರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಅನುಮೋದನೆಯಂತೆ ಸಂಘದ ವ್ಯಾಪ್ತಿಯಲ್ಲಿರುವ ಎಲ್ಲ ವಸತಿ ಶಾಲೆ- ಕಾಲೇಜುಗಳಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಮಹಾತ್ಮಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ, ಬಸವ ಜಯಂತಿ, ಸಂವಿಧಾನ ದಿನಾಚರಣೆ ಮತ್ತು ಯೋಗ ದಿನಾಚರಣೆಗಳನ್ನು ಮಾತ್ರ ಆಚರನೆ ಮಾಡಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಹೊರತುಪಡಿಸಿ ಇತರೆ ಧಾರ್ಮಿಕ ಹಬ್ಬಗಳನ್ನು ವಸತಿ ಶಾಲೆ-ಕಾಲೇಜುಗಳಲ್ಲಿ ಆಚರಿಸಬಾರದು. ಒಂದು ವೇಳೆ ಕಂಡುಬಂದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ ಎಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಎಸ್ ನವೀನ್‌ಕುಮಾರ್ ರಾಜು ಸೂಚನೆ ನೀಡಿದ್ದಾರೆ.