ನ್ಯೂಸ್

ನಕಲಿ ಜಾತಿಪತ್ರ ಗೋಲ್ಮಾಲ್​ಗೆ ಬ್ರೇಕ್; ಸಿಂಧುತ್ವ ಪ್ರಮಾಣ ಪತ್ರ ನೀಡುವುದಕ್ಕಾಗಿ ಹೊಸ ನಿಯಮ ಜಾರಿ

Webdesk - Ravikanth

| ಕೀರ್ತಿನಾರಾಯಣ ಸಿ. ಬೆಂಗಳೂರು

ಸರ್ಕಾರಿ ಉದ್ಯೋಗ ಹಾಗೂ ಸೌಲಭ್ಯ ದಕ್ಕಿಸಿಕೊಳ್ಳಲು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಹೊಸ ನಿಯಮ ಜಾರಿಗೊಳಿಸಿದೆ. ಇದರನ್ವಯ ಇನ್ಮುಂದೆ ಸರ್ಕಾರಿ ಅಧಿಕಾರಿ ಅಥವಾ ನೌಕರರ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಯ ಕುರಿತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್​ಇ) ವಿಚಾರಣಾ ವರದಿ ಕೊಟ್ಟ ನಂತರವೇ ಜಾತಿ ಸಿಂಧುತ್ವ ಪ್ರಮಾಣ ಪತ್ರ ವಿತರಣೆಯಾಗಲಿದೆ.

ಜಾತಿ ಪರಿಶೀಲನಾ ಸಮಿತಿಗಳು ಜಾಗೃತ ಕೋಶದಿಂದ ವರದಿ ಪಡೆದ ಬಳಿಕವೇ ಜಾತಿ ಸಿಂಧುತ್ವ ಪ್ರಮಾಣ ಪತ್ರ ಕೊಡಬೇಕೆಂದು 2019ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಆದಾಗ್ಯೂ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರಲಿಲ್ಲ. ಹೀಗಾಗಿ ಸರ್ಕಾರದ ಇಲಾಖೆ ಅಥವಾ ಸಂಸ್ಥೆಗಳಲ್ಲಿ ನೌಕರರಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಡಿಸಿಆರ್​ಇ ಅನುಮತಿ ಮುದ್ರೆಯೊತ್ತಿದ ಬಳಿಕವೇ ಜಾತಿ ಪ್ರಮಾಣ ಪತ್ರ ಕೊಡುವಂತೆ ಸಮಾಜ ಕಲಾಣ್ಯ ಇಲಾಖೆ ಆದೇಶ ಹೊರಡಿಸಿದೆ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ನಿಯಮ 7 (4)ರಂತೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜಾತಿಗಳಲ್ಲದೆ ಯಾವುದೇ ಜಾತಿಯ ಬಗ್ಗೆ ಅನುಮಾನ ಕಂಡು ಬಂದಲ್ಲಿ ಡಿಸಿಆರ್​ಇಗೆ ಶಿಫಾರಸು ಮಾಡುವ ಮುಖಾಂತರ ಸಂಬಂಧಿತ ಅಭ್ಯರ್ಥಿಯ ಬಗ್ಗೆ ವಿಚಾರಣಾ ವರದಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಎಡಿಜಿಪಿಗೆ 3 ತಿಂಗಳ ಗಡುವು: ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳಿಂದ ಸ್ವೀಕೃತಗೊಂಡ ಪ್ರಕರಣಗಳಲ್ಲಿ 3 ತಿಂಗಳ ಒಳಗೆ ವಿಚಾರಣೆ ಪೂರ್ಣಗೊಳಿಸಿ ವರದಿ ನೀಡಬೇಕು ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ಕೊಡಲಾಗಿದೆ.

ಯಾವ್ಯಾವ ಜಾತಿ ಬಗ್ಗೆ ಪರಿಶೀಲನೆ?: ಪರಿಶಿಷ್ಟ ಪಂಗಡ - ಗೊಂಡ, ನಾಯಕ್​ಪಾಡ್, ರಾಜ್​ಗೊಂಡ, ಜೇನು ಕುರುಬ, ಕಾಡು ಕುರುಬ, ಕಮ್ಮಾರ, ಕನಿಯನ್, ಕನ್ಯಾನ್, ಕೊಂಕಣ, ಕೊಂಕಣಿ, ಕುಕನ, ಕೊಲಿ ಧೊರ್, ತೊಕ್ರೆ ಕೊಲಿ, ಕೊಲ್ಚ, ಕೊಲ್ಗ, ಕುರುಬ, ಮಲೇರು, ಮರಾಠ, ಮರಾಠಿ, ಪರಿವಾರ, ತಳವಾರ.

ಪರಿಶಿಷ್ಟ ಜಾತಿ -ಬೇಡ ಜಂಗಮ, ಬುಡಗ ಜಂಗಮ, ಭೋವಿ, ಚನ್ನ ದಾಸರ, ಹಂಡಿ ಜೋಗಿಸ್, ಕೊಟೆಗಾರ್, ಮೇಟ್ರಿ, ಮೊಗೆರ್.

ಸುಳ್ಳು ಜಾತಿಪತ್ರದ 591 ಕೇಸ್ ಪತ್ತೆ

591 ಜನ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಎಸ್ಸಿ-ಎಸ್ಟಿ ವರ್ಗಕ್ಕೆ ಮೀಸಲಿಟ್ಟಿದ್ದ ಸರ್ಕಾರಿ ಸೌಲಭ್ಯ ಪಡೆಯುತ್ತಿರುವುದನ್ನು ಡಿಸಿಆರ್​ಇ ಪತ್ತೆಹಚ್ಚಿತ್ತು. ಇದರಲ್ಲಿ 77 ಕೇಂದ್ರ ಸರ್ಕಾರಿ ನೌಕರರು, 230 ರಾಜ್ಯ ಸರ್ಕಾರಿ ನೌಕರರು, 58 ಮಂದಿ ಚುನಾವಣೆ ಉದ್ದೇಶಕ್ಕೆ, ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ 51 ಜನ, ವಿದ್ಯಾರ್ಥಿ ವೇತನ ಪಡೆಯಲು ಹಾಗೂ ಸರ್ಕಾರಿ ಜಮೀನು ಫಲಾನುಭವಿಗಳಾಗಲು 175 ಮಂದಿ ನಕಲಿ ಜಾತಿ ಪತ್ರ ಸಲ್ಲಿಸಿರುವುದು ದೃಢಪಟ್ಟಿದೆ.

ಎಲ್ಲೆಲ್ಲಿ ಪ್ರಕರಣ ಹೆಚ್ಚು?: ಬೆಂಗಳೂರು ನಗರ, ಕೋಲಾರ, ಮೈಸೂರು, ಕೊಡಗು, ಬೆಳಗಾವಿ, ಗದಗ, ವಿಜಯಪುರ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಸುಳ್ಳು ಜಾತಿ ಪತ್ರ ಸಲ್ಲಿಕೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಅರ್ಹರಿಗೆ ಸೌಲಭ್ಯ ತಲುಪಿಸುವ ಉದ್ದೇಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾತಿಗಳಿಗೆ ಸಂಬಂಧಿಸಿದಂತೆ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲಾಗುತ್ತಿದೆ. ಇದರಿಂದ ಮೀಸಲಾತಿ ಸೌಲಭ್ಯವನ್ನು ಅನರ್ಹರು ದುರುಪಯೋಗಪಡಿಸಿಕೊಂಡು ಅರ್ಹರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಪೂರ್ವಾಪರವನ್ನು ಡಿಸಿಆರ್​ಇ ಮುಖಾಂತರ ಕೂಲಂಕಷವಾಗಿ ಪರಿಶೀಲಿಸಿ ವರದಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಜಾತಿ ಸಿಂಧುತ್ವ ಪ್ರಮಾಣ ಪತ್ರ ವಿತರಣೆಗೂ ಮುನ್ನ ಡಿಸಿಆರ್​ಇಯಿಂದ ವಿಚಾರಣಾ ವರದಿ ಪಡೆಯುವಂತೆ ಎಲ್ಲ ಡಿಸಿಗಳು ಹಾಗೂ ಜಾತಿ ಪರಿಶೀಲನಾ ಸಮಿತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಆದೇಶಿಸಿದೆ. ನಿಯಮದ ಅನ್ವಯ ಡಿಸಿಆರ್​ಇ ಪರಿಶೀಲನೆ ನಡೆಸಿ ವರದಿ ಕೊಡಲಿದೆ.| ಡಾ.ಪಿ.ರವೀಂದ್ರನಾಥ್ ಎಡಿಜಿಪಿ, ಡಿಸಿಆರ್​ಇ