ನ್ಯೂಸ್

'ಕರೊನಾ ಸೋಂಕು ನಿವಾರಣೆಯಾದವರ ಬೆನ್ನುಹತ್ತುವ ಮೆದುಳು ಸಂಬಂಧಿ ಖಾಯಿಲೆಗಳು'

ನ್ಯೂ ಯಾರ್ಕ್ : ಕರೊನಾ ಸೋಂಕು ತಗುಲಿ ಗುಣಮುಖರಾದವರಲ್ಲಿ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಅಮೆರಿಕನ್ನರ ಮೇಲೆ ನಡೆಸಿದ ಅಧ್ಯಯನದಲ್ಲಿ, ಮೂರು ರೋಗಿಗಳಲ್ಲಿ ಒಬ್ಬರಿಗೆ ಆರು ತಿಂಗಳೊಳಗೆ ಒತ್ತಡ, ಖಿನ್ನತೆ, ಪಾರ್ಶ್ವವಾಯು, ಡಿಮೆಂಷಿಯದಂತಹ ಸಮಸ್ಯೆಗಳು ಉಂಟಾಗಿರುವುದು ಕಂಡುಬಂದಿದೆ ಎನ್ನಲಾಗಿದೆ.

ಬಹುತೇಕ ಅಮೇರಿಕದವರೇ ಆದ ಒಟ್ಟು 2,36,379 ಕರೊನಾ ರೋಗಿಗಳ ಆರೋಗ್ಯ ದಾಖಲೆಗಳನ್ನು ಫ್ಲೂ ಮತ್ತು ಇತರ ಶ್ವಾಸಕೋಶದ ಸೋಂಕುಗಳನ್ನು ಹೊಂದಿದ ರೋಗಿಗಳಿಗೆ ಹೋಲಿಸಿ, ವಿಶ್ಲೇಷಿಸಲಾಯಿತು. ಇವರಲ್ಲಿ ಶೇ. 34 ರಷ್ಟು ಜನರು ಆರು ತಿಂಗಳೊಳಗೆ ನರರೋಗಗಳು ಅಥವಾ ಮನೋವೈದ್ಯಕೀಯ ಖಾಯಿಲೆಗಳಿಗೆ ಈಡಾಗಿದ್ದುದು ಕಂಡುಬಂತು ಎಂದು ಲ್ಯಾನ್ಸೆಟ್ ಸೈಕಿಯಾಟ್ರಿ ಜರ್ನಲ್​​ನಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನ ವರದಿ ತಿಳಿಸಿದೆ.

"ಫ್ಲೂ ಜ್ವರ ಅಥವಾ ಇತರ ಉಸಿರಾಟದ ಸೋಂಕುಗಳಿಗಿಂತ ಕೋವಿಡ್ -19 ರ ನಂತರ ಮೆದುಳಿನ ಕಾಯಿಲೆಗಳು ಮತ್ತು ಮನೋವೈದ್ಯಕೀಯ ಅಸ್ವಸ್ಥತೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ನಮ್ಮ ಫಲಿತಾಂಶಗಳು ಸೂಚಿಸುತ್ತವೆ" ಎಂದು ಅಧ್ಯಯನದಲ್ಲಿ ಭಾಗವಹಿಸಿದ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮನೋವೈದ್ಯ ಮ್ಯಾಕ್ಸ್ ಟಾಕ್ವೆಟ್ ಹೇಳಿದ್ದಾರೆ.

ಅಧ್ಯಯನಕ್ಕೊಳಗಾದ ಶೇ. 17 ಜನರಲ್ಲಿ ಒತ್ತಡ ಮತ್ತು ಶೇ. 14 ಜನರಲ್ಲಿ ಮೂಡ್​ ಡಿಸಾರ್ಡರ್​​ಗಳು ಸಾಮಾನ್ಯವಾಗಿ ಕಂಡುಬಂದವು. ಇದಕ್ಕೆ ಹೋಲಿಸಿದರೆ ಪಾರ್ಶ್ವವಾಯು, ಡಿಮೆಂಷಿಯ ಮತ್ತು ಇತರ ನರರೋಗಗಳು ವಿರಳವೆನಿಸಿದರೂ, ತೀವ್ರ ಪರಿಸ್ಥಿತಿ ತಲುಪಿದ್ದ ರೋಗಿಗಳಲ್ಲಿ ಅವು ಉಂಟಾದ ಪ್ರಸಂಗಗಳು ಹೆಚ್ಚಾಗಿದ್ದವು. ಉದಾಹರಣೆಗೆ, ತೀವ್ರ ನಿಗಾ ಚಿಕಿತ್ಸೆಗಾಗಿ ದಾಖಲಾದ ಶೇಕಡ 7 ರಷ್ಟು ಕೋವಿಡ್ ರೋಗಿಗಳು ಆರು ತಿಂಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು; ಶೇ.2 ರಷ್ಟು ಜನರು ಡಿಮೆಂಷಿಯಾಗೆ ಒಳಗಾಗಿದ್ದರು.

ಕರೊನಾ ವೈರಸ್​​ಗೂ ಮಾನಸಿಕ ಅಸ್ವಸ್ಥತೆಗೂ ಏನು ಲಿಂಕ್ ಎಂಬುದು ಸ್ಪಷ್ಟವಾಗದಿದ್ದರೂ, ಈ ಸಮಸ್ಯೆಗಳು 14 ಖಾಯಿಲೆಗಳ ಹೋಲಿಕೆಯಲ್ಲಿ ಅತಿಹೆಚ್ಚಾಗಿ ಕಂಡುಬಂದಿವೆ. ಒತ್ತಡ ಮತ್ತು ಖಿನ್ನತೆ ಅಮೆರಿಕದಲ್ಲಿ ಕರೊನಾದಿಂದ ಗುಣಮುಖರಾದ ಜನರಲ್ಲಿ ಸಾಮಾನ್ಯವಾಗಿ ಕಂಡುಬಂದಿರುವುದರಿಂದ, ಈ ಮಹಾಮಾರಿಯ ಕಾರಣದಿಂದ ಮಾನಸಿಕ ಅಸ್ವಸ್ಥತೆಯ ಅಲೆ ಏಳಲಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದಲ್ಲಿ ಇದೇ ಸಂಶೋಧಕರು ನಡೆಸಿದ್ದ ಅಧ್ಯಯನದಲ್ಲಿ ಶೇ. 20 ರಷ್ಟು ಕೋವಿಡ್ ರೋಗಿಗಳಿಗೆ ಗುಣಮುಖರಾಗಿ 3 ತಿಂಗಳಾಗುವ ಒಳಗೆ ಮಾನಸಿಕ ಖಾಯಿಲೆ ಆರಂಭವಾಗುವುದನ್ನು ಬೆಳಕಿಗೆ ತಂದಿದ್ದರು. ಇದೀಗ ಪ್ರಸ್ತುತ ಅಧ್ಯಯನದಲ್ಲಿ ಹೆಚ್ಚಿದ ರಿಸ್ಕ್​ ಫ್ಯಾಕ್ಟರ್​ನ ಬಗ್ಗೆ ಪುರಾವೆ ದೊರೆತಿರುವುದು ಅವರ ಕಳವಳಕ್ಕೆ ಕಾರಣವಾಗಿದೆ.
ಈ ಅಧ್ಯಯನದಲ್ಲಿ ಈ ಖಾಯಿಲೆಗಳು ಉಂಟಾಗಲು ಕಾರಣವಾಗುವ ನಿರ್ದಿಷ್ಟ ಜೈವಿಕ ಅಥವಾ ಮಾನಸಿಕ ಕಾರ್ಯವಿಧಾನಗಳ ಬಗ್ಗೆ ತಿಳಿದುಬಂದಿಲ್ಲ. ಆದ್ದರಿಂದ ಅವುಗಳನ್ನು ತಡೆಗಟ್ಟುವ ಅಥವಾ ಚಿಕಿತ್ಸೆ ನೀಡುವ ಉದ್ದೇಶದಿಂದ ತುರ್ತು ಸಂಶೋಧನೆಯ ಅಗತ್ಯವಿದೆ ಎಂದಿದ್ದಾರೆ.

"ಹೆಚ್ಚಿನ ಅಸ್ವಸ್ಥತೆಗಳಿಗೆ ವೈಯಕ್ತಿಕ ಅಪಾಯಗಳು ಚಿಕ್ಕದಾಗಿದ್ದರೂ, ಇಡೀ ಜನಸಂಖ್ಯೆಯಲ್ಲಿ ಇದರ ಪರಿಣಾಮವು ಗಣನೀಯವಾಗಿರಬಹುದು" ಎಂದು ಈ ಅಧ್ಯಯನದ ನೇತೃತ್ವ ವಹಿಸಿದ ಆಕ್ಸ್‌ಫರ್ಡ್ ಮನೋವೈದ್ಯಶಾಸ್ತ್ರ ಪ್ರಾಧ್ಯಾಪಕ ಪಾಲ್ ಹ್ಯಾರಿಸನ್ ಹೇಳಿದ್ದಾರೆ. (ಏಜೆನ್ಸೀಸ್)