ನ್ಯೂಸ್

ಒಟ್ಟಿಗೆ ಹುಡುಗಿ ಮನೆಗೆ ನುಗ್ಗಿದ ಹಾಲಿ, ಮಾಜಿ ಪ್ರೇಮಿಗಳಿಬ್ಬರು ಅರೆಸ್ಟ್​​! ಇತ್ಯರ್ಥಕ್ಕೆ ಹೋಗಿ ಇಕ್ಕಟ್ಟಿಗೆ ಸಿಲುಕಿದರು

ಭೋಪಾಲ್​: ಏಕಕಾಲದಲ್ಲಿ ದಾಳಿ ಮಾಡಿದ ಪ್ರಿಯಕರ ಮತ್ತು ಮಾಜಿ ಪ್ರಿಯಕರನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಬಾವಿಗೆ ಹಾರಿದ ಘಟನೆ ಮಧ್ಯಪ್ರದೇಶದ ಬೆತುಲ್​ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ಯುವತಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒಂದು ಕಡೆ ಮಾಜಿ ಪ್ರಿಯಕರನಿಗೆ ಲವ್​ ಬ್ರೇಕಪ್​ ಮಾಡಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ಆತನೊಂದಿಗೆ ಆಕೆ ಮಾತನಾಡುತ್ತಿರಲಿಲ್ಲ. ಇದರ ನಡುವೆ ಯುವತಿಯು ಬೇರೆ ಹುಡುಗನೊಂದಿಗೆ ಲವ್​ ಶುರು ಮಾಡಿದ್ದಳು. ಹಾಲಿ ಪ್ರಿಯಕರನಿಗೆ ಮಾಜಿ ಪ್ರಿಯಕರನ ಬಗ್ಗೆ ತಿಳಿಯಿತು. ಇದರಿಂದ ಇಬ್ಬರೂ ಸೇರಿ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟನೆ ಕೇಳಲು ಹುಡುಗಿಯ ಮನೆಗೆ ಹೋಗಲು ನಿರ್ಧರಿಸಿದರು.

ಇದಾದ ನಂತರ ಇಬ್ಬರೂ ಸೇರಿ ಜನರ ಗುಂಪನ್ನು ಕಟ್ಟಿಕೊಂಡು, ಕೋಲುಗಳು ಮತ್ತು ಚಾಕುಗಳೊಂದಿಗೆ ಹುಡುಗಿಯ ಮನೆಗೆ ತಲುಪಿದರು. ಪ್ರೇಯಸಿಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹುಡುಗಿ ಹೊರಗೆ ಓಡಿ ಬಂದು ಮನೆ ಆವರಣದಲ್ಲಿರುವ ಬಾವಿಗೆ ಹಾರಿದ್ದಾಳೆ. ಪ್ರತ್ಯಕ್ಷದರ್ಶಿಗಳು ಆಕೆಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಹುಡುಗಿಯ ತಂದೆ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ. ಹಾಲಿ ಮತ್ತು ಮಾಜಿ ಪ್ರಿಯಕರ ಇಬ್ಬರನ್ನೂ ಬೊರ್ದೇಹಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)