ನ್ಯೂಸ್

ರೈಲಿನ ಮೇಲೆ ಸೆಲ್ಫೀಗೆ ಫೋಸ್​ ಕೊಡುತ್ತಿದ್ದ ಬಾಲಕ ವಿದ್ಯುತ್​ ತಗುಲಿ ಸತ್ತೇ ಹೋದ

ಚೆನ್ನೈ: ಚಲಿಸುವ ರೈಲಿನೊಂದಿಗೆ ಹುಡುಗಾಟ ಬೇಡವೇ ಬೇಡ ಎಂದು ಅನೇಕರು ಬುದ್ಧಿವಾದ ಹೇಳುತ್ತಲೇ ಇರುತ್ತಾರೆ. ಆದರೂ ಅಂಥ ದುಸ್ಸಾಹಸಗಳಿಗೆ ಕೈ ಹಾಕುವರರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಕೇವಲ ಚಲಿಸುವ ರೈಲು ಮಾತ್ರವಲ್ಲ ನಿಂತ ರೈಲಿನೊಂದಿಗೆ ಹುಡುಗಾಟವೂ ಪ್ರಾಣ ತೆಗೆಯಬಹುದು ಎನ್ನುವುದಕ್ಕೆ ಇಂದು ತಮಿಳುನಾಡಿನಲ್ಲಿ ನಡೆದಿರುವ ಘಟನೆಯೇ ಉದಾಹರಣೆ.

ತಿರುವನೆಲ್ಲಿ ರೈಲು ನಿಲ್ದಾಣದ ನಾಗರಿಕ ಸರಬರಾಜು ಗುಣಮಟ್ಟ ಪರೀಕ್ಷಕರ ಮಗ ಗಣೇಶ್ವರ ಇಂದು ತಂದೆಯನ್ನು ನೋಡಲು ರೈಲು ನಿಲ್ದಾಣಕ್ಕೆ ಬಂದಿದ್ದ. ಅಪ್ಪ ಕೆಲಸದಲ್ಲಿ ತೊಡಗಿದ್ದಾಗ 15 ವರ್ಷದ ಮಗನಿಗೆ ಸೆಲ್ಫೀ ತೆಗೆದುಕೊಳ್ಳಬೇಕೆಂದೆನಿಸಿದೆ. ಅದೂ ರೈಲಿನ ಇಂಜಿನ್​ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳಬೇಕೆಂಬ ಆಸೆ ಹುಟ್ಟಿದೆ.

ಅದರಂತೆ ಗೂಡ್ಸ್​ ಗಾಡಿಯೊಂದರ ಇಂಜಿನ್​ ಮೇಲೆ ಹತ್ತಿದ ಗಣೇಶ್ವರ ಸೆಲ್ಫೀ ತೆಗೆದುಕೊಳ್ಳಲಾರಂಭಿಸಿದ್ದಾನೆ. ಆ ರೈಲು ವಿದ್ಯುತ್​ ಚಾಲಿತ ರೈಲಾಗಿದ್ದು, ಆತ ಸೆಲ್ಫೀ ತೆಗೆದುಕೊಳ್ಳುವಾಗ ಮೇಲಿದ್ದ ವಿದ್ಯುತ್​ ತಂತಿಗೆ ಆತನ ದೇಹ ತಗುಲಿದೆ. 25,000 ವ್ಯಾಟ್​ ವಿದ್ಯುತ್​ ಹರಿಯುತ್ತಿದ್ದ ವಿದ್ಯುತ್​ ತಂತಿಗೆ ದೇಹ ತಗಲುತ್ತಿದ್ದಂತೆಯೇ ಬಾಲಕ ಸಾವನ್ನಪ್ಪಿದ್ದಾನೆ. ವಿದ್ಯುತ್​ನಿಂದ ಸುಟ್ಟಿದ್ದ ದೇಹ ಪ್ಲಾಟ್​ಫಾರಂನ ಕೆಳಗೆ ಬಿದ್ದಿದೆ.

ಬಾಲಕನ ದೇಹವನ್ನು ತಿರುವನೆಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. (ಏಜೆನ್ಸೀಸ್​)