ನವದೆಹಲಿ: ಪ್ರೀತಿಸಿದ ಹುಡುಗಿಯ ಮನ ಗೆಲ್ಲಲು ಇಂದಿನ ಹುಡುಗರು ಏನು ಬೇಕಾದರೂ ಮಾಡುತ್ತಾರೆ, ಯಾವ ಹಂತಕ್ಕಾದರೂ ಹೋಗ್ತಾರೆ ಎಂಬುದರಲ್ಲಿ ಅನುಮಾನವೇ ಬೇಡ. ಪ್ರೇಯಸಿ ಹೇಳುವ ಮಾತು, ಆಕೆಯ ಕೋರಿಕೆಯನ್ನು ತಪ್ಪದೆ ಪಾಲಿಸುವ ಯುವಕರು, ಕಡೆಯಲ್ಲಿ ಪ್ರೀತಿ ಕುರುಡು ಎಂಬ ಮಾತನ್ನು ನಿಜವಾಗಿಸಿಬಿಡುತ್ತಾರೆ. ಇದಕ್ಕೆ ಇಲ್ಲೊಂದು ಘಟನೆ ಜ್ವಲಂತ ಸಾಕ್ಷಿ. ದೆಹಲಿಯ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ, ಮನೆಯಲ್ಲಿ ತನ್ನ ತಾಯಿ ಇಟ್ಟಿದ್ದ ಒಡವೆಗಳನ್ನು ಕದ್ದು ಪ್ರೇಯಸಿಗೆ ಐಫೋನ್ ಕೊಡಿಸಿದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಪ್ರೇಯಸಿಯ ಜನ್ಮದಿನಕ್ಕೆ ಗಿಫ್ಟ್ ಕೊಡುವ ಸಲುವಾಗಿ ಆಕೆಗೆ ತನ್ನ ತಾಯಿಯ ಚಿನ್ನಾಭರಣವನ್ನು ಕಳ್ಳತನ ಮಾಡಿ, ಅದನ್ನು ಮಾರಿ, ಬಂದ ಹಣದಲ್ಲಿ ಲವರ್ಗೆ 50 ಸಾವಿರ ರೂ. ಮೌಲ್ಯದ ಐಫೋನ್ ಮೊಬೈಲ್ ಕೊಡಿಸಿದ್ದಾನೆ. ಪ್ರಾರಂಭದಲ್ಲಿ ಇದು ಮನೆಯವರಿಂದ ಹಿಡಿದು ತನ್ನ ಸಹಪಾಠಿಗಳಿಗೂ ಗೊತ್ತಿರಲಿಲ್ಲ. ಆದ್ರೆ, ಒಂದು ಚಿಕ್ಕ ಸುಳಿವಿನಿಂದ ಆತನ ಕಿಲಾಡಿ ಕೈಚಳಕ ಬಟಾಬಯಲಾಗಿದೆ. ಮನೆಯಲ್ಲಿ ಚಿನ್ನ ಕಳ್ಳತನವಾಗಿದೆ ಎಂದು ತಾಯಿ ದೂರು ಕೊಟ್ಟ ಬಳಿಕವೇ ಈ ಘಟನೆ ಬೆಳಕಿಗೆ ಬಂದಿದೆ.
ಆಗಸ್ಟ್ 03ರಂದು ಬಾಲಕನ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಬೆನ್ನತ್ತಿದ ಪೊಲೀಸರು, ಮನೆ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ಕೊಟ್ಟ ಮಹಿಳೆಯನ್ನು ವಿಚಾರಣೆ ಮಾಡಿದ ಪೊಲೀಸರು, ಯಾರ ಮೇಲಾದರೂ ಅನುಮಾನವಿದ್ಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲವು ದಿನಗಳ ಹಿಂದೆ ನನ್ನ ಮಗ, ಅವನ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನೇಹಿತೆಯ ಜನ್ಮದಿನಕ್ಕೆ ಗಿಫ್ಟ್ ಕೊಡಬೇಕು ಹಣ ಕೊಡಿ ಎಂದು ಕೇಳಿದ್ದ, ಇದಕ್ಕೆ ನಾನು ನಿರಾಕರಿಸಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇತಿಹಾಸ ಅಧ್ಯಾಯನವು ನೈತಿಕ ಮೌಲ್ಯಗಳ ಔನತ್ಯಕ್ಕೆ ಅಡಿಗಲ್ಲು ಇತಿಹಾಸ ಉಪನ್ಯಾಸಕರ ಕಾರ್ಯಾಗಾರದಲ್ಲಿ ಡಿಡಿ ಜಯಣ್ಣ ಹೇಳಿಕೆ
ಈ ಚಿಕ್ಕ ಸುಳಿವನ್ನೇ ಜಾಲಾಡಿದ ಪೊಲೀಸರು ಅಂತಿಮವಾಗಿ ನಿಮ್ಮ ಮಗನೇ ಕಳ್ಳತನದ ಹೊಣೆ ಹೊತ್ತಿದ್ದಾನೆ ಎಂದಿದ್ದಾರೆ. ಅಸಲಿಗೆ ಬಾಲಕನ ಸ್ನೇಹಿತರು ಕೂಡ ಆತ ತನ್ನ ಪ್ರೇಯಸಿಗಾಗಿ ಫೋನ್ ತಂದಿರುವುನ್ನು ಗಮನಿಸಿದ್ದಾರೆ. ಈ ಎಲ್ಲಾ ವಿಷಯವನ್ನು ಸೂಕ್ಷ್ಮವಾಗಿ ಅರಿತ ಪೊಲೀಸರು, ನಿಮ್ಮ ಚಿನ್ನ ಕದ್ದು ಅದರಲ್ಲಿ ಬಂದ ಹಣದಿಂದ ಈತ ಐಫೋನ್ ಕೊಡಿಸಿದ್ದಾನೆ ಎಂದು ತಿಳಿಸಿದ್ದಾರೆ. 2 ಚಿನ್ನದ ಸರ, ಓಲೆ ಮತ್ತು ಉಂಗುರವನ್ನು ಸದ್ಯ ಪೊಲೀಸರು ವಶಪಡಿಸಿಕೊಂಡಿದ್ದು, ಮಹಿಳೆಗೆ ಹಿಂತಿರುಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).