ಹೆತ್ತ ಮಗನನ್ನೇ ರಾಡ್‌ನಿಂದ ಹೊಡೆದು ಕೊಂದ ತಂದೆ 
ನ್ಯೂಸ್

ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಲಿಯಾಯ್ತು: ಹೆತ್ತ ಮಗನನ್ನೇ ರಾಡ್‌ನಿಂದ ಹೊಡೆದು ಕೊಂದ ತಂದೆ! | Father Kills Son

  • ತಂದೆಯಿಂದಲೇ ಹಲ್ಲೆಗೊಳಗಾಗಿ 16 ವರ್ಷದ ಮಗ ಸಾವು

  • ತಾಯಿಯ ಮೇಲಿನ ಹಲ್ಲೆ ತಡೆಯಲು ಮಧ್ಯಪ್ರವೇಶಿಸಿದ್ದ ಬಾಲಕ

  • ಆರೋಪಿ ತಂದೆಯನ್ನು ವಶಕ್ಕೆ ಪಡೆದಿದ ಪೊಲೀಸರು

  • ಪೊಲೀಸ್ ವಾಹನದಿಂದ ಆರೋಪಿಯನ್ನು ಹೊರಗೆಳೆದು ಗ್ರಾಮಸ್ಥರಿಂದ ಹಲ್ಲೆ

Father Kills Son: ಅಪ್ಪ-ಅಮ್ಮನ ಜಗಳ ಬಿಡಿಸಲು ಹೋಗಿ ತಾಯಿಯ ರಕ್ಷಣೆಗೆ ನಿಂತಿದ್ದ 16 ವರ್ಷದ ಬಾಲಕನನ್ನು ಸ್ವಂತ ತಂದೆಯೇ ಹತ್ಯೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಮನೆಯಲ್ಲಿ ದಂಪತಿ ಜಗಳವಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಮಗ ದುರಂತ ಅಂತ್ಯ ಕಂಡಿದ್ದಾನೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಈ ದಾರುಣ ಘಟನೆ ನಡೆದಿದೆ. ಆರೋಪಿ ನಂಜೇಗೌಡ (50) ತನ್ನ ಮಗ ಸುನಿಲ್ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕ ಪ್ರಾಣ ಬಿಟ್ಟಿದ್ದಾನೆ. ಮೃತ ಸುನಿಲ್ ಕುಣಿಗಲ್ ಪಟ್ಟಣದ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಆಗಾಗ ಪತ್ನಿ ಜತೆ ಜಗಳವಾಡುತ್ತಿದ್ದ ಆರೋಪಿ

ಮೂಲಗಳ ಪ್ರಕಾರ, ನಂಜೇಗೌಡ ಆಗಾಗ ಪತ್ನಿ ರಂಜಿತಾ ಜತೆ ಜಗಳವಾಡುತ್ತಿದ್ದ. ಈ ಹಿಂದೆಯೂ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಜೈಲು ಸೇರಿದ್ದ ಆತ, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಶನಿವಾರ ರಾತ್ರಿ ಆರಂಭವಾದ ದಂಪತಿಯ ಜಗಳ ಭಾನುವಾರವೂ ಮುಂದುವರಿದಿತ್ತು. ಈ ವೇಳೆ ನಂಜೇಗೌಡ ಪತ್ನಿ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಸುನಿಲ್ ತಾಯಿಯ ರಕ್ಷಣೆಗೆ ಬಂದಿದ್ದಾನೆ.

ರಾಡ್‌ನಿಂದ ಮಗನ ಮೇಲೆ ಹಲ್ಲೆ

ಇದರಿಂದ ಕೋಪಗೊಂಡ ನಂಜೇಗೌಡ, ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ಮನೆಯೊಳಗಿದ್ದ ಮಗ ಸುನಿಲ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಭೀಕರ ರಸ್ತೆ ಅಪಘಾತ: ಕಂದಕಕ್ಕೆ ಬಿದ್ದ ಬೊಲೆರೊ, 6 ಮಂದಿ ದುರ್ಮರಣ! | Uttarakhand Accident

ಆರೋಪಿ ನಂಜೇಗೌಡನನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದಾಗ, ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಜೀಪಿನಿಂದ ಹೊರಗೆಳೆದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ತಾಯಿಯನ್ನು ರಕ್ಷಿಸಲು ಹೋದ ಮಗನ ಬಲಿ ಪಡೆದ ಈ ಕೃತ್ಯದ ವಿರುದ್ಧ ಸ್ಥಳೀಯರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.