ನ್ಯೂಸ್

ಮದುವೆ ಮನೆಯಲ್ಲಿಯೇ ನಡೆಯಿತು ದುರಂತ: ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ..?

ಶಂಶಾಬಾದ್‌: ಆಟವಾಡುವಾಡುತ್ತಿದ್ದ ವೇಳೆ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಏಳು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್‌ನಲ್ಲಿ ನಡೆದಿದೆ.

ಮೃತ ಬಾಲಕನ್ನು ಅಭಿಜಿತ್​ ರೆಡ್ಡಿ ಎಂದು ಗುರುತಿಸಲಾಗಿದೆ. ನಂದಿಗಾಮ ಮೂಲದ ಶ್ರೀಕಾಂತ್ ರೆಡ್ಡಿ ಎಂಬುವರು ತನ್ನ ಸಂಬಂಧಿಕರ ಮದುವೆಗೆಂದು ಹೆಂಡತಿ ಮತ್ತು ಮಗ ಅಭಿಜಿತ್​ ಜತೆಗೆ ಶಂಶಾಬಾದ್‌ನ ಪಂಕ್ಷನ್ ಹಾಲ್​ಗೆ ತೆರಳಿದ್ದರು. ಈ ವೇಳೆ ಶ್ರೀಕಾಂತ್ ಮದುವೆ ಕೆಲಸದಲ್ಲಿ ನಿರತರಾಗಿದ್ದರೆ, ಮಗ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆದಿದ್ದಾನೆ.

ಸ್ವಲ್ಪ ಸಮಯದವರೆಗೆ ಮಗ ಬಾರದೆ ಇದ್ದಾಗ ಶ್ರೀಕಾಂತ್ ಸಂಬಂಧಿಕರಿಗೆ ಈ ಕುರಿತಾಗಿ ವಿಚಾರಿಸಿದ್ದಾರೆ. ಆದರೆ, ಬಾಲಕನ ಸುಳಿವು ಲಭ್ಯವಾಗದ ಕಾರಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧವನ್ನೂ ನಡೆಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗದ ಕಾರಣ ಬಾಲಕನ ತಂದೆಯು ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಫಂಕ್ಷನ್ ಹಾಲ್ ತಲುಪಿ ತನಿಖೆ ಆರಂಭಿಸಿದ್ದಾರೆ.

ಈ ವೇಳೆ ಫಂಕ್ಷನ್ ಹಾಲ್‌ನ ಹಿಂಭಾಗದಲ್ಲಿ ಒಳಚರಂಡಿ ಗುಂಡಿಯೊಂದು ಕಂಡುಬಂದಿದ್ದು, ಅಧಿಕಾರಿಗಳು ಅದನ್ನು ಶೋಧಿಸಿದ್ದು ಮಗುವಿನ ಮೃತದೇಹ ಪತ್ತೆಯಾಗಿದೆ. ಮಗು ಬಿದ್ದಿರುವುದನ್ನು ನೋಡಿದ ಪೋಷಕರು ಬೆಚ್ಚಿಬಿದ್ದಿದ್ದು, ಬಳಿಕ ಶವವನ್ನು ಹೊರ ತೆಗೆಯಲಾಗಿದೆ. ಫಂಕ್ಷನ್ ಹಾಲ್ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಮಗು ಪ್ರಾಣ ಕಳೆದುಕೊಂಡಿದೆ ಎಂದು ಸಂಬಂಧಿಕರು ಆರೋಪಿಸಿ ಫಂಕ್ಷನ್ ಹಾಲ್ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.(ಏಜೆನ್ಸೀಸ್)