ನ್ಯೂಸ್

ಮನುಷ್ಯ ಧರ್ಮಕ್ಕೆ ನಮಿಸಿ

ಭಗವಂತನ ಸೃಷ್ಟಿಯಲ್ಲಿ ಏನೆಲ್ಲ ಅದ್ಭುತ ಅಡಗಿದೆ. ಅದರ ಗುಟ್ಟು ಯಾರಿಗೂ ತಿಳಿಯದು. ಯಾವ ಸಂದರ್ಭದಲ್ಲಿ ಏನು ಸಂಭವಿಸು ವುದೋ ಹೇಳಲಾಗದು. ಬದುಕು ಸುಖ ದುಃಖ, ನೋವು ನಲಿವು, ಮಾನ ಅಪಮಾನ, ಜಯ ಅಪಜಯ ಮೊದಲಾದ ದ್ವಂದ್ವಗಳಿಂದ ಕೂಡಿದೆ. ಈ ಸಂಗತಿ ಯಾರಿಗೆ ಗೊತ್ತಿದೆಯೋ ಅವರು ಜೀವನದಲ್ಲಿ ಏನೆಲ್ಲ ಕಷ್ಟ ಗಳು ಬಂದರೂ ಅವುಗಳಿಗೆ ಎದೆಗುಂದಲಾರರು. ಸಂಪತ್ತು ಸದ್ವಿನಿಯೋಗ ವಾಗಬೇಕು. ಗಳಿಸಿದ ಸಂಪತ್ತಿಗೆ ನಿಜವಾದ ಬೆಲೆ ಬರುತ್ತದೆ. ಐಶ್ವರ್ಯ ಪ್ರಾಪ್ತವಾದಾಗ ಮನುಷ್ಯ ಅಹಂಕಾರ ಪಡಬಾರದು. ಅಹಂಕಾರ ಅವನತಿಗೆ ಕಾರಣವಾಗುತ್ತದೆ. ಮನುಷ್ಯ ಜೀವನದಲ್ಲಿ ಚತುರ್ವಿಧ ಪುರು ಷಾರ್ಥಗಳನ್ನು ಬಯಸುವುದು ಸಹಜ.

ಆದರೆ ಧರ್ವಚರಣೆಯಲ್ಲಿ ತೊಡಗಿಸಿಕೊಂಡಾಗ ಅವೆಲ್ಲವೂ ಪ್ರಾಪ್ತವಾಗುತ್ತವೆ. ಮಂತ್ರ, ತೀರ್ಥ, ಗುರು, ದೇವರು, ದೈವ ಮತ್ತು ವೈದ್ಯರಲ್ಲಿ ಯಾವ ಭಾವನೆಗಳನ್ನು ಇಟ್ಟು ನಡೆಯುತ್ತೇವೆಯೋ ಅದಕ್ಕೆ ತಕ್ಕ ಫಲಗಳನ್ನು ಮನುಷ್ಯ ಪಡೆಯು ವುದರಲ್ಲಿ ಯಾವುದೇ ಅನುಮಾನವಿಲ್ಲ. ಮೌಲ್ಯಗಳ ಉಳಿವು-ಅಳಿವು ಮನುಷ್ಯನ ಆಚರಣೆಯಲ್ಲಿವೆ. ನೀತಿವಂತರು ನಿರಾಶರಾಗದೇ ನೋವು ನುಂಗಿ ನಲಿವನ್ನು ತೋರಬೇಕಾಗಿದೆ. ಅಸಹನೆ, ಅಸಮಾಧಾನ, ಅತೃಪ್ತಿ ಹೋಗಲಾಡಿಸಿಕೊಂಡವನೇ ನಿಜವಾದ ಧರ್ಮ ನಿಷ್ಠ. ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನಾ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು.

ಅಧರ್ಮ-ಅಜ್ಞಾನದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯಲಾರವು. ತಾಳ್ಮೆ ಮತ್ತು ಸಹನೆಯ ಗುಣ ಇಲ್ಲದಿರುವುದೇ ಇಂದಿನ ಅಶಾಂತಿ ಮತ್ತು ಅತೃಪ್ತಿಗಳಿಗೆ ಕಾರಣವೆಂದರೆ ತಪ್ಪಾಗದು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಮೂಲ ಸಂಸ್ಕೃತಿ ಪರಂಪರೆ ಮರೆಯಬಾರದು. ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳಲು ಸಾಧ್ಯ. ದುರ್ಜನರ ಒಡನಾಟದಲ್ಲಿ ಬಾಳಿದರೆ ಬದುಕು ನಾಶಗೊಳ್ಳುತ್ತದೆ. ಅರಿತು ಬಾಳುವುದರಲ್ಲಿ ಸುಖ ಶಾಂತಿಯಿದೆ, ಬದುಕಿನ ಉತ್ಕರ್ಷ ಮತ್ತು ಶ್ರೇಯಸ್ಸಿದೆ. ಮನುಷ್ಯ ಧರ್ಮಕ್ಕೆ ತಲೆಬಾಗಬೇಕೆ ಹೊರತು ಅವಿವೇಕಿಗಳಿಗಲ್ಲ.