ಭೂಮಿ ಹುಣ್ಣಿಮೆ ಅಂಗವಾಗಿ ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್ ದಂಪತಿ ತೋಟದಲ್ಲಿ ಪೂಜೆ ಸಲ್ಲಿಸಿದರು.  
ನ್ಯೂಸ್

ಭೂತಾಯಿಗೆ ಸೀಮಂತ ಶಾಸ್ತ್ರ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಂಗಳವಾರ ರೈತರು ಬೆಳೆದು ನಿಂತ ಪೈರಿಗೆ ಭೂಮಿ ಹುಣ್ಣಿಮೆ ಅಂಗವಾಗಿ ಉಡಿ ತುಂಬಿ, ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಭಕ್ಷೃಗಳನ್ನು ಭೂತಾಯಿಗೆ ನೈವೇದ್ಯವಾಗಿ ಸಮಪರ್ಕಿಸಿದರು. ಹಬ್ಬದ ಹಿಂದಿನ ರಾತ್ರಿ ವಿವಿಧ ಜಾತಿಯ ಸಸ್ಯಗಳ ಎಲೆಗಳನ್ನು, ಕುಂಬಳಕಾಯಿ, ಸಿಹಿಕುಂಬಕಾಯಿ, ಸೌತೆಕಾಯಿ, ಅಮಟೆಕಾಯಿ ಸೇರಿದಂತೆ ಎಲ್ಲಾ ರೀತಿಯ ತರಕಾರಿಗಳನ್ನು ಸಂಗ್ರಹಿಸಿ ಬೇಯಿಸಿ ಚರಗ ತಯಾರಿಸಲಾಗಿತ್ತು.

ಇದನ್ನು ಮಂಗಳವಾರ ಭೂಮಿ ಹುಣ್ಣಿಮೆ ಹಬ್ಬದ ದಿನ ಸೂರ್ಯ ಹುಟ್ಟುವುದರೊಳಗಾಗಿ ಭೂಮಿಗೆ ಬೀರಲಾಯಿತು. ಇದರೊಂದಿಗೆ ಹಾಲು ಹುಗ್ಗಿ ತಯಾರಿಸಿ ಭೂಮಿಗೆ ನೇವೇದ್ಯ ನೀಡಲಾಯಿತು. ಇದಾದ ಬಳಿಕ ಕುಟುಂಬದ ಸದಸ್ಯರೆಲ್ಲರೂ ಗದ್ದೆ, ತೋಟಗಳಲ್ಲಿ ಒಟ್ಟಿಗೆ ಕುಳಿತು ಹಬ್ಬದೂಟ ಮಾಡಿದ್ದು ವಿಶೇಷವಾಗಿತ್ತು.

ಭೂಮಿ ಹುಣ್ಣಿಮೆ ಹಿಂದಿನ ರಾತ್ರಿ ಹಳ್ಳಿಗಳಲ್ಲಿ ವಿವಿಧ ಬಗೆಯ ಅಡುಗೆ ತಯಾರಿಸುವ ಮೂಲಕ ಅನೇಕ ಮನೆಗಳಲ್ಲಿ ರಾತ್ರಿಯಿಡೀ ಎಚ್ಚರವಾಗಿದ್ದರು. ಮುಂಜಾನೆಯೇ ಭೂಮಿಗೆ ಪೂಜೆ ಸಲ್ಲಿಸುವ ಕಾರಣದಿಂದ ಕೆಲವರು ಹಿಂದಿನ ರಾತ್ರಿ ಪೂರ್ತಿ ವಿವಿಧ ಬಗೆಯ ಅಡುಗೆ ತಯಾರಿಸಿದರು.

ಹೋಳಿಗೆ, ಕಜ್ಜಾಯ, ಕೊಟ್ಟೆ ಕಡುಬು, ಅಮಟೆಕಾಯಿ ಸಿಹಿಪಲ್ಯ ಇವು ಭೂಮಿ ಹುಣ್ಣಿಮೆಯ ವಿಶೇಷ ಅಡುಗೆಗಳಾಗಿದ್ದವು. ಭೂಮಿಯೂ ಒಂದು ಹೆಣ್ಣು. ಎಲ್ಲರನ್ನೂ ಸಲಹುವ ಭೂಮಿ ತಾಯಿಯನ್ನು ತೃಪ್ತಿ ಪಡಿಸುವ ಕಾಯಕ ಭಾರತೀಯ ಸಂಸ್ಕೃತಿಯಲ್ಲಿ ನಿರಂತರವಾಗಿ ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಸಂಭ್ರಮದ ಭೂಮಿ ಹುಣ್ಣಿಮೆ ನೆರವೇರಿತು.

ಭತ್ತದ ಗದ್ದೆ ಹೊಂದಿದ್ದವರು ಸಸಿಯನ್ನು ಮುತ್ತೈದೆಯಂತೆ ಸಿಂಗರಿಸಿ ನೈವೇದ್ಯ ನೀಡಿದರೆ, ಕೆಲವರು ಅಡಕೆ ಮರಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಿದರು. ಐದು ಅಡಕೆ ಮರ, ತೆಂಗಿನಮರಗಳಿಗೆ ಜೇಡಿ ಮಣ್ಣು ಹಾಗೂ ಕೆಮ್ಮಣ್ಣಿನಿಂದ ಪಟ್ಟೆ ಬಳಿದರು.

ಹಸೆ ಬಿತ್ತಾರದಿಂದ ಅಲಂಕೃತಗೊಂಡಿರುವ ಬುಟ್ಟಿಯಲ್ಲಿ ಮುಂಜಾನೆ ಚರಗವನ್ನು ಭೂಮಿಗೆ ಹಾಕಿದ ರೈತರು ನಂತರ ಅದೇ ಬುಟ್ಟಿಯಲ್ಲಿ ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನು ತಮ್ಮ ಹೊಲಕ್ಕೆ ಒಯ್ದು, ಭೂಮಿಗೆ ನೈವೇದ್ಯ ಮಾಡಿ, ನಂತರ ಅಲ್ಲಿಯೇ ಊಟ ಮಾಡಿದರು.