- ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ಪ್ರೀತಿ, ಮದುವೆಗಿಂತ ಕರಿಯರ್ ಮುಖ್ಯ
- ವೃತ್ತಿ, ಸಾಧನೆಗೆ ಎಲ್ಲದಕ್ಕಿಂತ ಮೊದಲ ಆದ್ಯತೆ, ಪ್ರಾಮುಖ್ಯತೆ
Born Dates: ಕೆಲವರಿಗೆ ಜೀವನದಲ್ಲಿ ಪ್ರೀತಿ, ಸಂಬಂಧ, ಕುಟುಂಬವೇ ಎಲ್ಲಕ್ಕಿಂತ ಮುಖ್ಯವಾದರೆ, ಇನ್ನು ಕೆಲವರಿಗೆ ತಮ್ಮ ಗುರಿ, ಹಾಕಿಕೊಂಡಿರುವ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಮುಗಿಸುವುದು, ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದೇ ಮೊದಲ ಆದ್ಯತೆ ಆಗಿರುತ್ತದೆ. ಆದರೆ, ಕೆಲವೇ ಕೆಲವರು ಮಾತ್ರ ಈ ಪ್ರೀತಿ-ಪ್ರೇಮ, ದಾಂಪತ್ಯದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೆ ತಮ್ಮ ವೃತ್ತಿಜೀವನ ಮತ್ತು ಸಾಧನೆಗಳತ್ತ ಹೆಚ್ಚು ತುಡಿತ ಹೊಂದಿರುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಗುಣಸ್ವಭಾವ ಮತ್ತು ಜೀವನದ ಆದ್ಯತೆಗಳು ಅವರ ಜನಿಸಿದ ದಿನಾಂಕದ ಮೇಲೆಯೇ ನಿರ್ಧರಿತ ಎನ್ನಲಾಗಿದೆ. ಹಾಗಿದ್ದರೆ, ಯಾವ ದಿನಾಂಕಗಳಲ್ಲಿ ಹುಟ್ಟಿದವರು ಪ್ರೀತಿ ಸಂಬಂಧ, ಮದುವೆಗಿಂತ ಹೆಚ್ಚಾಗಿ ತಮ್ಮ ಕರಿಯರ್, ಸಾಧನೆಗಳಿಗೆ ಹೆಚ್ಚು ಆದ್ಯತೆ, ಪ್ರಾಮುಖ್ಯತೆ ನೀಡುತ್ತಾರೆ ಎಂಬ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ತಿಳಿಯೋಣ ಬನ್ನಿ.
ಸಂಖ್ಯೆ 1 (ಹುಟ್ಟಿದ ದಿನಾಂಕ: 1, 10, 19, 28)
ಸೂರ್ಯನ ಪ್ರಭಾವ ಹೊಂದಿರುವ ಈ ಸಂಖ್ಯೆಯವರು ಜನ್ಮಜಾತ ನಾಯಕರೇ. ಯಾರ ಕೆಳಗೂ ಕೆಲಸ ಮಾಡಲು ಇಷ್ಟಪಡದ ಈ ವ್ಯಕ್ತಿಗಳು, ವೃತ್ತಿಯಲ್ಲಿ ಉನ್ನತ ಮಟ್ಟ ತಲುಪುವುದನ್ನೇ ತಮ್ಮ ಮುಖ್ಯ ಧ್ಯೇಯ ಮಾಡಿಕೊಂಡಿರುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಹೆಸರು ಗಳಿಸಲು ವಿಪರೀತ ಶ್ರಮಿಸುತ್ತಾರೆ. ತಮ್ಮ ಬೆಳವಣಿಗೆಗೆ ಅಡ್ಡಿಯಾಗುವ ಸಂಬಂಧಗಳಿಂದ ದೂರವಿರಲು ಇಚ್ಛಿಸುತ್ತಾರೆ.
ಸಂಖ್ಯೆ 4: (ಹುಟ್ಟಿದ ದಿನಾಂಕ: 4, 13, 22, 31)
ರಾಹುವಿನ ರೂಲಿಂಗ್ ಪವರ್ನಿಂದ ಈ ಸಂಖ್ಯೆಯವರು ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ 'ಪ್ರಾಕ್ಟಿಕಲ್' ಆಗಿ ಆಲೋಚಿಸುತ್ತಾರೆ. ಕರಿಯರ್, ಆರ್ಥಿಕ ಸ್ಥಿರತೆ ಮತ್ತು ಭವಿಷ್ಯದ ಭದ್ರತೆಗೆ ಇವರ ಮೊದಲ ಆದ್ಯತೆ. ಪ್ರೀತಿಯನ್ನು ಮಾತಿನಲ್ಲಿ ವ್ಯಕ್ತಪಡಿಸದಿದ್ದರೂ, ಕುಟುಂಬಕ್ಕೆ ಉತ್ತಮ ಭವಿಷ್ಯ ಕಟ್ಟಿಕೊಡುವುದನ್ನೇ ನಿಜವಾದ ಪ್ರೀತಿ ಎಂದು ನಂಬುತ್ತಾರೆ.
ಸಂಖ್ಯೆ 8: (ಹುಟ್ಟಿದ ದಿನಾಂಕ: 8, 17, 26)
ಶನಿಯ ಪ್ರಭಾವ ಹೊಂದಿರುವ ಈ ವ್ಯಕ್ತಿಗಳು ಅಷ್ಟು ಸುಲಭವಾಗಿ ಯಶಸ್ಸು ಗಳಿಸಲ್ಲ. ಕಠಿಣ ಶ್ರಮದಿಂದ ಗುರಿ ತಲುಪುವವರೆಗೆ ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದರಿಂದ ಜತೆಗಾರರಿಗೆ ಇವರು ದೂರ ಉಳಿಯುತ್ತಿದ್ದಾರೆ ಎಂಬ ಭಾವನೆ ಮೂಡಬಹುದು. ಆದರೆ, ಕುಟುಂಬದ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.