ನ್ಯೂಸ್

ಪ್ರೇಯಸಿ ಜತೆ ಬ್ರಿಟನ್ ಪ್ರಧಾನಿ ಗೌಪ್ಯ ವಿವಾಹ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (56) ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್ (33) ಅವರನ್ನು ಗೌಪ್ಯವಾಗಿ ವಿವಾಹ ಆಗಿದ್ದಾರೆ. ವೆಸ್ಟ್​ಮಿನ್​ಸ್ಟರ್​ನ ಚರ್ಚ್​ವೊಂದರಲ್ಲಿ ಅವರ ಮದುವೆ ಶನಿವಾರ ನಡೆದಿದೆ.

ಕ್ಯಾಥೋಲಿಕ್ ಪಂಗಡದ ಕ್ಯಾಥೆಡ್ರಲ್ (ಚರ್ಚ್) ಶನಿವಾರ ಮಧ್ಯಾಹ್ನ 1.30ರ ವೇಳೆಗೆ (ಸ್ಥಳೀಯ ಕಾಲಮಾನ) ದಿಢೀರ್ ಮುಚ್ಚಲಾಯಿತು. 30 ನಿಮಿಷದ ನಂತರ ಕ್ಯಾರಿ ಮದುಮಗಳ ದಿರಿಸಿನಲ್ಲಿ ಆಗಮಿಸಿದರು. ಅಷ್ಟು ಹೊತ್ತಿಗೆ ಜಾನ್ಸನ್ ಕೂಡ ಹಾಜರಾದರು. ವಿವಾಹ ಸರಳವಾಗಿ ನೆರವೇರಿತು. ಕೆಲವು ಗಣ್ಯಗರಿಗೆ ಕಡೆಗಳಿಗೆಯಲ್ಲಿ ಆಹ್ವಾನ ನೀಡಲಾಗಿತ್ತು. ಪ್ರಧಾನಿ ಕಚೇರಿಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಲಂಡನ್​ನ ಎರಡು ಪತ್ರಿಕೆಗಳು ವರದಿ ಮಾಡಿವೆ.

ಈ ಕುರಿತಂತೆ ಪ್ರಧಾನಿ ಕಚೇರಿ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಹಲವು ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿದ್ದ ಜಾನ್ಸನ್ ಮತ್ತು ಕ್ಯಾರಿಗೆ 2020ರ ಏಪ್ರಿಲ್​ನಲ್ಲಿ ಪುತ್ರ ಜನಿಸಿದ್ದ. ನಂತರ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ಇನ್ನೊಂದು ಮಗು ಬಯಸಿರುವುದಾಗಿಯೂ ಹೇಳಿದ್ದರು. ಅವರು 2022ರ ಜುಲೈನಲ್ಲಿ ವಿವಾಹ ಆಗುತ್ತಾರೆಂದು ಹೇಳಲಾಗಿತ್ತು. ಜಾನ್ಸನ್​ಗೆ ಇದು ಎರಡನೇ ವಿವಾಹ. ವಕೀಲೆ ಮರಿನಾ ವೀಲರ್ ಜತೆಗಿನ ಮೊದಲ ವಿವಾಹ 2018ರ ಸೆಪ್ಟೆಂಬರ್​ನಲ್ಲಿ ಮುರಿದುಬಿದ್ದಿತ್ತು.