ನ್ಯೂಸ್

ಬೋರ್​ವೆಲ್​ನಲ್ಲಿ ಲೂಟಿ: ನಕಲಿ ಫೋಟೋ ಮತ್ತು ಬಿಲ್

|ಕೀರ್ತಿನಾರಾಯಣ ಸಿ. ಬೆಂಗಳೂರು

ದೇಶದ ಪ್ರತಿ ಮನೆಗೂ 2024ರ ವೇಳೆಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರದ ‘ಜಲಜೀವನ್ ಮಿಷನ್’ ಯೋಜನೆಯ ಪರಿಣಾಮಕಾರಿ ಜಾರಿಗೆ ಒತ್ತು ಕೊಟ್ಟಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಕೊಳವೆ ಬಾವಿ ಕೊರೆಯುವ ಹೆಸರಲ್ಲಿ ಲೂಟಿ ಹೊಡೆಯುವ ಕಾರ್ಯ ಮುಂದುವರಿದಿದೆ. ಬೋರ್​ವೆಲ್​ಗಳನ್ನು ಕೊರೆಯದೆಯೇ ನಕಲಿ ದಾಖಲೆಗಳನ್ನು ಸಲ್ಲಿಸಿ ಹಣ ಬಿಡುಗಡೆ ಮಾಡಿಸಿಕೊಂಡಿರುವ ಇನ್ನೊಂದು ಬೃಹತ್ ಹಗರಣ ಬೆಳಕಿಗೆ ಬಂದಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದಿರುವುದಾಗಿ ಬಿಲ್​ಗಳನ್ನು ಸಲ್ಲಿಸಿದ್ದು, ಹಣ ಮಂಜೂರು ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಬೋರ್​ವೆಲ್​ಗಳನ್ನು ಕೊರೆದಿಲ್ಲ. ಈ ಮೊದಲು ಕೊರೆಸಿರುವ ಕೊಳವಿ ಬಾವಿಯ ಅದೇ ಸ್ಥಳ, ಜಿಪಿಎಸ್​ನಲ್ಲಿ ಕೊರೆಸಿರುವಂತೆ ಫೋಟೋಶಾಪ್ ಮಾಡಿದ ನಕಲಿ ಫೋಟೋ ಮತ್ತು ಬಿಲ್​ಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ.

2014ರಿಂದ 2022ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ 11,493, ಕೋಲಾರ ಜಿಲ್ಲೆಯಲ್ಲಿ 7,153 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 3,054 ಬೋರ್​ವೆಲ್​ಗಳ ಕೊರೆಸಿರುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಹಿತಿ ಕೊಟ್ಟಿದೆ. ಲೆಕ್ಕದ ಪ್ರಕಾರ ಮೂರೂ ಜಿಲ್ಲೆಗಳಲ್ಲಿ 21,700 ಕೊಳವೆ ಬಾವಿ ಕೊರೆಸಲಾಗಿದೆ. ತಲಾ ಕೊಳವೆ ಬಾವಿಗೆ 2 ರಿಂದ 5 ಲಕ್ಷ ರೂ.ವರೆಗೆ ಬಿಲ್ ಮಾಡಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಸರಾಸರಿ 3 ಲಕ್ಷ ರೂ.ನಂತೆ ಲೆಕ್ಕ ಹಾಕಿದರೂ 21,700 ಬೋರ್​ವೆಲ್​ಗಳಿಗೆ 651 ಕೋಟಿ ರೂ. ವಿನಿಯೋಗಿಸಲಾಗಿದೆ.

‘ಬೋರ್​ವೆಲ್ ಗೋಲ್ಮಾಲ್’ ಬಯಲಿಗೆಳೆದಿದ್ದ ವಿಜಯವಾಣಿ

ಕೋಲಾರ ಉಪ ವಿಭಾಗದಲ್ಲಿ 2017-18 ಮತ್ತು 2018-19ರಲ್ಲೂ ಕೊಳವೆ ಬಾವಿ ಹೆಸರಲ್ಲಿ ನಡೆದಿದ್ದ ಹಗರಣವನ್ನು 2020ರ ಆ.12ರಂದು ಮುಖಪುಟದಲ್ಲಿ ‘ಬೋರ್​ವೆಲ್ ಗೋಲ್ಮಾಲ್’ ಶೀರ್ಷಿಕೆಯಡಿ ತನಿಖಾ ವರದಿ ಪ್ರಕಟಿಸುವ ಮೂಲಕ ವಿಜಯವಾಣಿ ಬಯಲಿಗೆಳೆದಿತ್ತು. ಈ ವರದಿ ಆಧರಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. 

ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಶೇ.40ಕ್ಕಿಂತ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯದೇ ಬಿಲ್ ಮಾಡಿಸಿಕೊಳ್ಳಲಾಗಿದೆ. ಇದು 3 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯಾದ್ಯಂತ ನಡೆದಿದೆ!

ತನಿಖೆಯಲ್ಲಿ ಗೊತ್ತಾಗಿದ್ದೇನು?: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಪಂಚಾಯಿತಿಯ ಗ್ರಾಮಗಳಾದ ಬೈರನಾಯಕನಹಳ್ಳಿ, ಪಾಕರಹಳ್ಳಿ, ನಾರಾಯಣಪುರ ಹಾಗೂ ಎ.ಜ್ಯೋತೇನಹಳ್ಳಿ ಪಂಚಾಯಿತಿಯ ಬನಹಳ್ಳಿ, ಗಾಜಗ, ಜುಂಬನಹಳ್ಳಿ ಹಾಗೂ ಚಿನ್ನಕೋಟೆ ಪಂಚಾಯಿತಿಯ ದಾಸರಹೊಸಹಳ್ಳಿ, ಕತ್ತಿಹಳ್ಳಿ, ತಮ್ಮೇನಹಳ್ಳಿ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆದಿರುವುದಾಗಿ ಫೋಟೋಶಾಪ್ ಮಾಡಿದ ಚಿತ್ರಗಳನ್ನು ಸಲ್ಲಿಸಲಾಗಿದೆ. ಆದರೆ, ಇದೇ ಸ್ಥಳಗಳಲ್ಲಿ 2 ವರ್ಷದ ಹಿಂದೆಯೇ ಬೋರ್​ವೆಲ್​ಗಳನ್ನು ಕೊರೆದು ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿತ್ತು. 2ನೇ ಬಾರಿಗೆ ಅದೇ ಸ್ಥಳ ಮತ್ತು ಜಿಪಿಎಸ್​ನಲ್ಲಿ ಕೊಳವೆ ಬಾವಿ ಕೊರೆದಿರುವುದಾಗಿ ಬಿಲ್​ಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಎಇಇ ಹಾಗೂ ಇಇ ಅನುಮೋದನೆ ಮಾಡಿದ್ದಾರೆ. ಇದೇ ರೀತಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಗಳಲ್ಲೂ ಗೋಲ್ಮಾಲ್ ಮಾಡಲಾಗಿದೆ. ಭೂಭೌತ ಸರ್ವೆಕ್ಷಣಾ ವರದಿಗಳಲ್ಲಿ ಕಡ್ಡಾಯವಾಗಿ ಇರಬೇಕಾದ ದಿನಾಂಕ, ಜಿಪಿಎಸ್ ಲೋಕೇಷನ್ ಸೇರಿದಂತೆ ಹಲವು ಅಂಶಗಳು ನಮೂದಿಸಿಲ್ಲ. ನಕಲಿ ವರದಿ ಸಲ್ಲಿಸಿರುವುದು ದೃಢಪಟ್ಟಿದೆ.

ಒಂದು ಬೋರ್, 2 ಬಿಲ್!

ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಕರ್ನಾಟಕದಲ್ಲಿ 2021-22ನೇ ಸಾಲಿಗೆ ಕೇಂದ್ರ ಸರ್ಕಾರ ಈ ಉದ್ದೇಶಕ್ಕಾಗಿ 5008 ಕೋಟಿ ರೂ. ಅನುದಾನ ಕೊಟ್ಟಿದೆ. 2022ರ ಮಾ.17ರವರೆಗೆ 1,252 ಕೋಟಿ ರೂ. ಡ್ರಾ ಮಾಡಿಕೊಂಡಿದ್ದು, ಅದರಲ್ಲಿ 1,208 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಆದರೆ, ಕೇಂದ್ರದ ಯೋಜನೆಯಡಿ ಒಮ್ಮೆ, ರಾಜ್ಯದ ಯೋಜನೆಯಡಿಯಲ್ಲೂ ಮತ್ತೊಮ್ಮೆ ಬಿಲ್ ಪಡೆದು ವಂಚಿಸಲಾಗಿದೆ.

ನಿಯಮವೇನು?

  1. ಬೋರ್​ವೆಲ್ ಕೊರೆಸುವ ಕುರಿತು ಗ್ರಾಮ ಪಂಚಾಯಿತಿಗೆ ಮಾಹಿತಿ ಕೊಡಬೇಕು
  2. ಕೊರೆದ ಬಳಿಕ ಕಡ್ಡಾಯವಾಗಿ ಭಾವಚಿತ್ರಸಹಿತ ಸ್ಥಳದ ದೃಢೀಕರಣ ಪಡೆದಿರಬೇಕು
  3. ಕೊಳವೆಬಾವಿ ಕೊರೆದಿರುವ ಕುರಿತು 3ನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಬೇಕು
  4. ಐಎಸ್​ಐ ಮಾರ್ಕ್ ಇರುವ 175 ಎಂಎಂ ಸ್ಟೀಲ್ ಕೇಸಿಂಗ್ ಪೈಪ್ ಅಳವಡಿಸಬೇಕು

ಯಾರೆಲ್ಲ ಭಾಗಿ?

ಅಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಅಧಿಕಾರಿ/ಸಿಬ್ಬಂದಿ ಶಾಮೀಲು ಆರೋಪ

ಗುತ್ತಿಗೆ ಮಂಜೂರು ಮಾಡುವ ಅಧಿಕಾರಿ, ಸ್ಥಳ ಪರಿಶೀಲನೆ ನಡೆಸುವ ಅಧಿಕಾರಿ, ಭೂ ವಿಜ್ಞಾನಿ, ಜೂನಿಯರ್ ಇಂಜಿನಿಯರ್, ಸಹಾಯಕ ಅಭಿಯಂತರರು ಭಾಗಿ

ಬೋರ್​ವೆಲ್ ಗುತ್ತಿಗೆ ಪಡೆಯುವ ಗುತ್ತಿಗೆದಾರರಿಂದ ಆಯಾ ವಿಭಾಗದ ಅಧಿಕಾರಿಗೆ ಇಂತಿಷ್ಟು ಕಮೀಷನ್ ನಿಗದಿ ಆರೋಪ

ವಿಫಲ ಬೋರ್​ವೆಲ್ ಜಾಗದಲ್ಲೇ ಮತ್ತೆ ಹೊಸದಾಗಿ ಕೊರೆದಂತೆ ದಾಖಲೆ ಸೃಷ್ಟಿ

ಹಿಂದಿನ ಸ್ಥಳದ ಜಿಪಿಎಸ್ ಲೊಕೇಷನ್ ಹಾಗೂ ಫೋಟೋಶಾಪ್ ಚಿತ್ರಗಳ ಸಲ್ಲಿಕೆ

ಎಲ್ಲ ಕೊಳವೆಬಾವಿಗಳ ಆಳವನ್ನು 1400 ಅಡಿಗಿಂತ ಮೇಲ್ಪಟ್ಟು ಎಂದು ದಾಖಲು

ಕಡ್ಡಾಯವಾಗಿ ಮಾಡಿಸಬೇಕಾದ ಥರ್ಡ್ ಪಾರ್ಟಿ ಇನ್​ಸ್ಪೆಕ್ಷನ್ ಮಾಡಿಸಿಯೇ ಇಲ್ಲ

ಭೂಭೌತ ವಿಜ್ಞಾನಿಗಳಿಂದ ಸರ್ವೆಕ್ಷಣೆ ನಡೆಸದೆ ಬೋರ್​ವೆಲ್ ಕೊರೆಸಲಾಗಿದೆ

ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಧಿಕಾರಿಗಳು, ಸಿಬ್ಬಂದಿ ನೇರವಾಗಿ ಶಾಮೀಲಾಗಿದ್ದಾರೆ. ಹೈಕೋರ್ಟ್ ಆದೇಶದಿಂದ ಮರುಜೀವ ಪಡೆದಿರುವ ಹಗರಣದ ಬಗ್ಗೆ ದೂರು ನೀಡಲಾಗಿದೆ. ಇಲಾಖೆಯವರು ಬೋರ್​ವೆಲ್ ಕೊರೆದಿರುವ ಸ್ಥಳಗಳ ವಿವರ ನೀಡಿದರೆ ಆ ಬಗ್ಗೆ ಸರ್ವೆ ನಡೆಸಿ ವರದಿ ನೀಡಲಾಗುವುದು.

| ಎಚ್.ಜಿ. ಅನಿಲ್​ಕುಮಾರ್ ಕಾನೂನು ಸಲಹೆಗಾರ