ನ್ಯೂಸ್

ಷಾ ಗಡಿ ಸಭೆ ಇಂದು: ಸಿಎಂಗಳ ಸಭೆಯಲ್ಲಿ ಬೊಮ್ಮಾಯಿ ನಿಲುವಿನ ಕುತೂಹಲ

Webdesk - Ravikanth

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ ನಡೆಸಲಿರುವ ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ಸಭೆ ಕುತೂಹಲ ಕೆರಳಿಸಿದೆ. ಪದೇಪದೆ ಗಡಿ ವಿವಾದ ಕೆದಕುತ್ತಿರುವ ಮಹಾರಾಷ್ಟ್ರದ ನಿಯೋಗ ಅಮಿತ್ ಷಾ ಭೇಟಿ ಮಾಡಿದ ಸಂದರ್ಭದಲ್ಲಿ ಎರಡೂ ರಾಜ್ಯದ ಮುಖ್ಯ ಮಂತ್ರಿಗಳ ಸಭೆ ಕರೆಯುವ ಭರವಸೆ ನೀಡಿದ್ದರು. ರಾಜ್ಯದ ಸಂಸದರು ಷಾ ಭೇಟಿ ಮಾಡುವರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರಾದರೂ ಆ ಭೇಟಿ ನಡೆಯಲಿಲ್ಲ. ಬುಧವಾರ ನಡೆಯಲಿರುವ ಸಭೆಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹುಬ್ಬಳ್ಳಿಯಿಂದ ಮಧ್ಯಾಹ್ನ 1.30ಕ್ಕೆ ಹೊರಟು ಸಂಜೆ 4ಕ್ಕೆ ದೆಹಲಿ ತಲುಪಲಿದ್ದಾರೆ. ಸಭೆಯ ಸಮಯ ಇನ್ನೂ ನಿಗದಿಯಾಗಿಲ್ಲ. ಬಹುತೇಕ ರಾತ್ರಿ ನಡೆಯಬಹುದೆಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರ ಗಡಿಗೆ ಸಂಬಂಧಿಸಿದಂತೆ 2004ರಲ್ಲಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಅದರೆ, ಆ ರಾಜ್ಯ ಕೇಂದ್ರದ ಮೇಲೆ ಸಾಕಷ್ಟು ಒತ್ತಡ ತರುತ್ತಿದೆ. ರಾಜ್ಯದ ನಿಲುವು ಮಾತ್ರ ಸ್ಪಷ್ಟವಾಗಿದೆ. ಆದರೂ, ಅಮಿತ್ ಷಾ ಎದುರು ಬೊಮ್ಮಾಯಿ ಎಷ್ಟರ ಮಟ್ಟಿಗೆ ರಾಜ್ಯದ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಫಜಲ್ ಅಲಿ ಆಯೋಗ ಶಿಫಾರಸು ಮಾಡಿರುವ ಭಾಷಾವಾರು ರಾಜ್ಯಗಳ ರಚನೆ ಅಥವಾ ಮಹಾಜನ್ ವರದಿಯ ಶಿಫಾರಸುಗಳ ಬಗ್ಗೆ ಮಾತ್ರ ಬೊಮ್ಮಾಯಿ ಸಭೆಯಲ್ಲಿ ಪ್ರಸ್ತಾಪ ಮಾಡಬೇಕಾಗಿದೆ. ಇಲ್ಲವೇ ಯಥಾಸ್ಥಿತಿಗೆ ಪಟ್ಟು ಹಿಡಿಯಬೇಕಾಗಿದೆ. ಇಲ್ಲದಿದ್ದರೆ ಸಮಸ್ಯೆ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಆದ್ದರಿಂದ ಸಭೆಯಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ವಾದ ಮಾಡಬೇಕಾಗಿದೆ.

ಗಡಿ ವಿಚಾರದ ಕುರಿತು ಗೃಹ ಸಚಿವ ಅಮಿತ್ ಷಾ ಕರೆದಿರುವ ಸಭೆಯಲ್ಲಿ ರಾಜ್ಯದ ನಿಲುವನ್ನು ಮಂಡಿಸಲಾಗುವುದು. ಸುಪ್ರೀಂಕೋರ್ಟ್ ನೀಡಿರುವ ತೀರ್ಪ, ಸಂವಿಧಾನದಲ್ಲಿರುವ ಅವಕಾಶಗಳು, ಕಾಯ್ದೆಗಳು, ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿಕೊಡಲಾಗುವುದು. | ಬಸವರಾಜ ಬೊಮ್ಮಾಯಿ ಸಿಎಂ

ಜತ್ತಿ ಅಥವಾ ನಿಜಲಿಂಗಪ್ಪ ಯಾವ ಮೇಲ್ಪಂಕ್ತಿ?

ಗಡಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ರಾಜ್ಯದ ಪೂರ್ವ ಮುಖ್ಯಮಂತ್ರಿಗಳಾದ ಬಿ.ಡಿ. ಜತ್ತಿ ಹಾಗೂ ಎಸ್. ನಿಜಲಿಂಗಪ್ಪ ವಿಭಿನ್ನ ಹಾದಿ ತುಳಿದಿದ್ದರು. ಬುಧವಾರ ಅಮಿತ್ ಷಾ ಕರೆದಿರುವ ಸಭೆಯಲ್ಲಿ ಹಾಲಿ ಮುಖ್ಯಮಂತ್ರಿ ಯಾರ ಮೇಲ್ಪಂಕ್ತಿ ಅನುಸರಿಸಲಿದ್ದಾರೆ ಎಂಬ ಕುತೂಹಲ ರಾಜ್ಯದಲ್ಲಿದೆ. ಜತ್ತಿ ಮುಖ್ಯಮಂತ್ರಿಯಾಗಿದ್ದಾಗ 1960ರಲ್ಲಿ ಕೇಂದ್ರದ ಗೃಹ ಸಚಿವ ಗೋವಿಂದ ವಲ್ಲಭ ಪಂತ್ ಗಡಿ ವಿವಾದದಲ್ಲಿ ಮಧ್ಯ ಪ್ರವೇಶಿಸಿ ಜತ್ತಿ ಅವರಿಗೆ ಮುಂಬೈಗೆ ಹೋಗಿ ಚರ್ಚೆ ನಡೆಸುವಂತೆ ಸೂಚಿಸಿದ್ದರು. ಜತ್ತಿ ಹೋಗಲು ಒಪ್ಪಿದಾಗ ರಾಜ್ಯದಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ಕರ್ನಾಟಕದಿಂದ ಕೊಡುವುದು ಏನೂ ಇಲ್ಲ, ಅಲ್ಲಿಂದ ಸೊಲ್ಲಾಪುರ, ಜತ್, ಅಕ್ಕಲಕೋಟೆ, ಸಾಂಗ್ಲಿ ಕೊಡುವಂತೆ ಹೇಳಿ ಬನ್ನಿ ಎಂಬ ಕೂಗು ಕೇಳಿ ಬಂದಿತ್ತು. ಜತ್ತಿ ಮುಂಬೈಗೆ ಹೋದಾಗ ಅಲ್ಲಿನ ಸಿಎಂ ವೈ.ಬಿ. ಚವ್ಹಾಣ್, ಬೆಳಗಾವಿ, ಕಾರವಾರ ವರ್ಗಾವಣೆ ಮಾಡಿ ಎಂಬ ಬೇಡಿಕೆಯನ್ನಿಟ್ಟಿದ್ದರು.

ಅದಕ್ಕೆ ಜತ್ತಿ ಅವರು, ನಾನು ಚಿಕ್ಕ ನಾಯಕ ಕರ್ನಾಟಕಕ್ಕೆ ಸೀಮಿತ ನಾಯಕ, ನೀವು ರಾಷ್ಟ್ರೀಯ ನಾಯಕರು. ನನ್ನ ಜನ ಮಹಾರಾಷ್ಟ್ರಕ್ಕೆ ಕೊಡುವುದು ಏನೂ ಇಲ್ಲ, ನಮಗೆ ಬರಬೇಕಾದ ಪ್ರದೇಶಗಳನ್ನು ಕೇಳಿ ಎಂಬ ಮಾತನ್ನು ನನ್ನ ಜನ ಹೇಳಿ ಕಳುಹಿಸಿದ್ದಾರೆ. ನಮ್ಮವರ ಭಾವನೆಯನ್ನು ನಿಮಗೆ ತಿಳಿಸಿದ್ದೇನೆ ಎಂದು ನಯವಾಗಿಯೇ ಹೇಳಿದ್ದರು. ಚವ್ಹಾಣ್ ಇದರಿಂದ ಕುಪಿತಗೊಂಡು, ಮಾಧ್ಯಮಗಳಿಗೆ ಏನು ಹೇಳುವುದು ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಜತ್ತಿ ‘ವಿ ಅಗ್ರಿ ಟೂ ಡಿಸ್​ಅಗ್ರಿ’ ಎಂಬ ಮಾತನ್ನು ಹೇಳಿದ್ದರು. ಮಾಧ್ಯಮಗಳ ಮುಂದೆಯೂ ವಾಸ್ತವವನ್ನು ತಿಳಿಸಿ ಬಂದಿದ್ದರು.

ಮಹಾಜನ್​ಗೆ ಒಪ್ಪಿದ ನಿಜಲಿಂಗಪ್ಪ: ಮುಂಬೈನಲ್ಲಿ 1966ರ ಅಕ್ಟೋಬರ್​ನಲ್ಲಿ ಇಂದಿರಾಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಬಾಪಟೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗ ಇಂದಿರಾಗಾಂಧಿ ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಆಯೋಗ ರಚನೆಗೆ ನಿರ್ಧರಿಸಿದ್ದರು. ಆರಂಭದಲ್ಲಿ ನಿಜಲಿಂಗಪ್ಪ ಸಾಕಷ್ಟು ವಿರೋಧ ಮಾಡಿದರೂ, ಇಂದಿರಾಗಾಂಧಿ ಅವರ ಮನವೊಲಿಸಿ ಮಹಾಜನ್ ಆಯೋಗ ರಚಿಸಿದ್ದರು.

ಕೇಂದ್ರ ಕಂಡುಕೊಳ್ಳುವ ಮಧ್ಯಮ ಮಾರ್ಗವೇನು?

ನವದೆಹಲಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ನಡುವೆ ಹಲವು ದಶಕಗಳಿಂದ ಮುಗಿಯದ ಬಿಕ್ಕಟ್ಟಿಗೆ ಕೊನೆಗೂ ಪರಿಹಾರ ಸಿಗುವುದೇ? ಇಂದು ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಈ ಕುತೂಹಲ ಮೂಡಿದೆ. ಈಶಾನ್ಯ ರಾಜ್ಯಗಳಂತೆ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳು ಗಡಿ ವಿವಾದಕ್ಕೆ ಸಂಬಂಧಿಸಿ ಪರಸ್ಪರ ಶಾಂತ್ರಿ ಮಂತ್ರ ಪಠಿಸಲು ಮುಂದಾಗಲಿವೆಯೇ ಎಂಬ ನಿರೀಕ್ಷೆ ಹಲವರಲ್ಲಿದೆ. ರಾಜ್ಯದ ಕಿಂಚಿತ್ ಭೂಮಿ ನೀಡುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರ ಸುಮ್ಮನೆ ಕೂರುವುದು ಕಷ್ಟ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಯಥಾಸ್ಥಿತಿ ಕಾಯ್ದುಕೊಂಡು, ಕಾನೂನು-ಸುವ್ಯವಸ್ಥೆ, ಜನಜೀವನಕ್ಕೆ ಹಾನಿಯಾಗದಂತೆ, ಸಹಕಾರ ತತ್ವ ಪಾಲಿಸಲು ಷಾ ನಿರ್ದೇಶನ ನೀಡಬಹುದು ಎನ್ನಲಾಗುತ್ತಿದೆ. ಈಶಾನ್ಯದ ಸಣ್ಣ ರಾಜ್ಯಗಳ ಮಧ್ಯೆ ಹಲವು ದಶಕಗಳಿಂದಿದ್ದ ಗಡಿ ಬಿಕ್ಕಟ್ಟನ್ನು ಪರಸ್ಪರ ಸಹಕಾರ, ಒಪ್ಪಂದ ಹಾಗೂ ಒಮ್ಮತದ ಮೂಲಕ ಸರಿಪಡಿಸಿರುವ ಕೇಂದ್ರಕ್ಕೆ ದೊಡ್ಡ ರಾಜ್ಯಗಳ ನಡುವಿನ ಗಡಿ ಬಿಕ್ಕಟ್ಟು ಸರಿಪಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಈಶಾನ್ಯ ರಾಜ್ಯಗಳು ಹಾಗೂ ಕರ್ನಾಟಕ-ಮಹಾರಾಷ್ಟ್ರಗಳ ಪರಿಸ್ಥಿತಿ ಬೇರೆ ಬೇರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗಿರುವಾಗ ಕೇಂದ್ರ ಕಂಡುಕೊಳ್ಳುವ ಮಧ್ಯಮ ಮಾರ್ಗ ಏನಿರಬಹುದು ಎಂಬ ಪ್ರಶ್ನೆ ಕುತೂಹಲಕ್ಕೆಡೆ ಮಾಡಿದೆ.