ನ್ಯೂಸ್

ಗಡಿ ಸಂಘರ್ಷ: ಅಫ್ಘಾನಿಸ್ತಾನದೊಂದಿಗಿನ ಯುದ್ದದಲ್ಲಿ 48 ಗಂಟೆಗಳ ಕದನ ವಿರಾಮ ಘೋಷಿಸಿದ ಪಾಕ್​| Border Conflict

ಇಸ್ಲಾಮಾಬಾದ್: ಪಾಕಿಸ್ತಾನ​ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷದಲ್ಲಿ(Border Conflict) ಎರಡೂ ಕಡೆಗಳಲ್ಲಿ 12 ಕ್ಕೂ ಜೀವಗಳನ್ನು ಬಲಿಯಾದ ನಂತರ, ಪಾಕಿಸ್ತಾನ ಬುಧವಾರ (ಅಕ್ಟೋಬರ್​,15) ಸಂಜೆ 6 ಗಂಟೆಗೆ ತಾಲಿಬಾನ್ ಆಡಳಿತದೊಂದಿಗೆ 48 ಗಂಟೆಗಳ ಕದನ ವಿರಾಮವನ್ನು ಘೋಷಿಸಿದೆ.

ತಾಲಿಬಾನ್ ಕೋರಿಕೆಯ ಮೇರೆಗೆ, ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ, ಉಭಯ ದೇಶಗಳು ಪರಸ್ಪರ ಒಪ್ಪಿಗೆಯೊಂದಿಗೆ, ಪಾಕಿಸ್ತಾನ ಸರ್ಕಾರ ಮತ್ತು ಅಫ್ಘಾನ್ ತಾಲಿಬಾನ್ ಆಡಳಿತದ ನಡುವೆ ತಾತ್ಕಾಲಿಕ ಕದನ ವಿರಾಮವನ್ನು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ಕಚೇರಿಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.

ಈ ಅವಧಿಯಲ್ಲಿ, ರಚನಾತ್ಮಕ ಸಂವಾದದ ಮೂಲಕ ಪರಿಹರಿಸಬಹುದಾದ ಸಮಸ್ಯೆಗೆ ಸಕಾರಾತ್ಮಕ ಪರಿಹಾರವನ್ನು ಕಂಡುಕೊಳ್ಳಲು ಎರಡೂ ಕಡೆಯವರು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾರೆ ಎಂದು FO ಹೇಳಿದ್ದಾರೆ.

ಕಂದಹಾರ್‌ ಮೇಲೆ ಪಾಕ್​ ದಾಳಿ

ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಬುಧವಾರ ಮುಂಜಾನೆ ಪಾಕಿಸ್ತಾನ ಸಶಸ್ತ್ರ ಪಡೆಗಳು ವೈಮಾನಿಕ ದಾಳಿ ನಡೆಸಿದ ನಂತರ ಕದನ ವಿರಾಮ ಘೋಷಿಸಲಾಯಿತು. ಅಲ್ಲದೆ, ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಸಮೀಪವಿರುವ ಸ್ಪಿನ್ ಬೋಲ್ಡಕ್ ಜಿಲ್ಲೆಯ ವಸತಿ ಪ್ರದೇಶಗಳ ಮೇಲೆ ಈ ದಾಳಿಗಳು ನಡೆದಿದ್ದು, ಕನಿಷ್ಠ 15 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಇತ್ತೀಚಿನ ವರ್ಷಗಳಲ್ಲಿ ಕಂಡುಬರುವ ಅತ್ಯಂತ ಮಾರಕ ಸಂಘರ್ಷಗಳಲ್ಲಿ ಒಂದಾಗಿ ಉಲ್ಬಣಗೊಂಡಾಗ, ಪಾಕಿಸ್ತಾನದ ಗಡಿಯಲ್ಲಿ ದಾಳಿಗಳನ್ನು ತೋರಿಸುವ ಡ್ರೋನ್ ದೃಶ್ಯಾವಳಿಗಳನ್ನು ಬುಧವಾರ ಅಫ್ಘಾನ್ ತಾಲಿಬಾನ್ ಬಿಡುಗಡೆ ಮಾಡಿತು.

ಅಫ್ಘಾನ್​-ಪಾಕ್​ ಸಂಘರ್ಷ

ಕಳೆದ ವಾರ ಅಫ್ಘಾನಿಸ್ತಾನದಲ್ಲಿ ನಡೆದ ಸರಣಿ ಸ್ಫೋಟಗಳ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಹಿಂಸಾಚಾರ ಹದಗೆಟ್ಟಿದೆ. ಇದರಲ್ಲಿ ಕಾಬೂಲ್‌ನಲ್ಲಿ ನಡೆದ ಎರಡು ಸ್ಫೋಟಗಳು ಪಾಕಿಸ್ತಾನದ್ದೇ ಎಂದು ಹೇಳಲಾಗಿದೆ. ಪ್ರತೀಕಾರವಾಗಿ, ಅಫ್ಘಾನ್ ತಾಲಿಬಾನ್ ಸರ್ಕಾರವು ತನ್ನ ದಕ್ಷಿಣ ಗಡಿಯ ಕೆಲವು ಭಾಗಗಳಲ್ಲಿ ದಾಳಿಯನ್ನು ಪ್ರಾರಂಭಿಸಿತು. ಇಸ್ಲಾಮಾಬಾದ್ ದೃಢವಾದ ಎಚ್ಚರಿಕೆಯೊಂದಿಗೆ ಪ್ರತಿಕ್ರಿಯಿಸಿತು, ಬಲವಾದ ಪ್ರತಿದಾಳಿಯ ಭರವಸೆ ನೀಡಿತು.

ಅಫ್ಘಾನಿಸ್ತಾನವು ಉಗ್ರಗಾಮಿ ಗುಂಪುಗಳಿಗೆ, ವಿಶೇಷವಾಗಿ ಪಾಕಿಸ್ತಾನಿ ತಾಲಿಬಾನ್ ತೆಹ್ರೀಕ್-ಇ-ತಾಲಿಬಾನ್ (ಟಿಟಿಪಿ) ಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ ಕಾಬೂಲ್ ಇದನ್ನು ನಿರಾಕರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಮೇಲಿನ ಹಲವಾರು ದಾಳಿಗಳಿಗೆ ಟಿಟಿಪಿ ಕಾರಣ ಎಂದು ನಂಬಲಾಗಿದೆ. (ಏಜೆನ್ಸೀಸ್​)