ಹುಣಸೂರು ತಾಲೂಕು ಶಿರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿ ಎಸ್.ವಸಂತಕುಮಾರ ಮಾತನಾಡಿದರು. ಮುಖ್ಯಶಿಕ್ಷಕ ಪುಟ್ಟರಾಜು, ಸಹಶಿಕ್ಷಕರಾದ ಆಶಾ, ಶ್ರೀನಿವಾಸ್, ಎಸ್‌ಡಿಎಂಸಿ ಸದಸ್ಯರು ಇದ್ದಾರೆ.
ಹುಣಸೂರು : ಮೊಬೈಲ್ ಬಳಕೆ ಮಕ್ಕಳ ಆರೋಗ್ಯ ಹಾಗೂ ಬೌದ್ಧಿಕ ಮಟ್ಟದ ಮೇಲೆ ವೃತ್ತಿರಿಕ್ತ ಪರಿಣಾಮ ಬೀರುತ್ತಿದ್ದು ಎಚ್ಚೆತ್ತುಕೊಳ್ಳಬೇಕೆಂದು ಮುಳ್ಳೂರು ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಎಸ್.ವಸಂತಕುಮಾರ ಸಲಹೆ ನೀಡಿದರು.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಕ್ಲಸ್ಟರ್ ವ್ಯಾಪ್ತಿಯ ಶಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮೊಬೈಲ್ ಬಿಡಿ-ಪುಸ್ತಕ ಹಿಡಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೈಮೇಲೆ ಹರಕು ಬಟ್ಟೆಯಿದ್ದರೂ ಪರವಾಗಿಲ್ಲ ಕೈಯಲೊಂದು ಪುಸ್ತಕವಿರಲಿ. ಮಕ್ಕಳು ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬಾರದು. ಅದರ ಬದಲಾಗಿ ಪುಸ್ತಕಗಳನ್ನು ಹಿಡಿದು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಜ್ಞಾನಾರ್ಜನೆ, ಬೌದ್ಧಿಕ ವಿಕಾಸ, ಮಾನಸಿಕ ಸ್ಥೈರ್ಯ, ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ. ಪ್ರತಿ ಶಾಲೆಗಳಲ್ಲಿ ಗ್ರಂಥಾಲಯವಿದ್ದು ಅದರ ಸದುಪಯೋಗ ಪಡಿಸಿಕೊಳ್ಳುಬೇಕು. ಮೊಬೈಲ್ ಬಳಕೆ ಕುರಿತು ಪಾಲಕರು ಗಮನಹರಿಸಬೇಕು ಎಂದು ಹೇಳಿದರು.
ಇದೇ ವೇಳೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಗ್ರಂಥಾಲಯದ 10,000 ರೂ.,ಅನುದಾನದಿಂದ ಹೊಸದಾಗಿ ಖರೀದಿಸಿದ ಹೊಸ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಪುಟ್ಟರಾಜು, ಸಹಶಿಕ್ಷಕರಾದ ಆಶಾ, ಶ್ರೀನಿವಾಸ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ಅಡುಗೆ ಸಿಬ್ಬಂದಿ, ಶಾಲಾ ಮಕ್ಕಳು ಹಾಜರಿದ್ದರು.