ನ್ಯೂಸ್

ನೆಟ್​ಫ್ಲಿಕ್ಸ್​ ನೋಡುತ್ತಾ ಪಿಜ್ಜಾ ತಿನ್ನೋದಕ್ಕೇ ಸಂಬಳ ಕೊಡುತ್ತೆ ಈ ಕಂಪನಿ! ಲಕ್​ ಇದ್ದರೆ ನೀವೂ ಸೆಲೆಕ್ಟ್​ ಆಗಬಹುದು

ಅಮೆರಿಕ: ಈಗೆಲ್ಲ ಒಟಿಟಿಯದ್ದೇ ಯುಗ. ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡುವುದಕ್ಕಿಂತ ಮನೆಯಲ್ಲಿ ಕುಳಿತು ಒಟಿಟಿಯಲ್ಲಿ ನೋಡೋದೆ ಒಳಿತು ಎನ್ನುತ್ತೆ ನಮ್ಮ ಸಮಾಜ. ಅದೇ ರೀತಿ ನಿಮಗೂ ನೆಟ್​ಫ್ಲಿಕ್ಸ್​ಗೂ ಅಳಿಸಲಾಗದ ನಂಟು ಉಂಟಾಗಿದೆಯಾ? ಹಾಗಾದರೆ ನಿಮಗೆ ಇದೆ ಒಂದು ಅದ್ಭುತ ಅವಕಾಶ. ನೆಟ್​ಫ್ಲಿಕ್ಸ್​ನಲ್ಲಿ ವೆಬ್​ ಸೀರಿಸ್​ ನೋಡುತ್ತಾ ಪಿಜ್ಜಾ ತಿನ್ನೋದಕ್ಕೆ ಸಂಬಳ ಕೊಡಲು ಈ ಸಂಸ್ಥೆ ಸಿದ್ಧವಾಗಿದೆ.

ಅಮೆರಿಕದ ಬೋನಸ್​ಫೈಂಡರ್​ ಹೆಸರಿನ ಜಾಲತಾಣ ಅಂತದ್ದೊಂದು ವಿಶೇಷ ಕೆಲಸಗಾರರನ್ನು ಹುಡುಕಲಾರಂಭಿಸಿದೆ. ಪ್ರೊಫೆಷನಲ್​ ಬಿಂಜೆ ವಾಚರ್​ ಬೇಕು ಎಂದು ಜಾಹೀರಾತು ನೀಡಿದೆ. ಅವರ ಕೆಲಸ ಬೇರೇನಿಲ್ಲ. ಮೂರು ನೆಟ್​ಫ್ಲಿಕ್ಸ್​ ಸೀರಿಸ್​ಗಳನ್ನು ನೋಡಬೇಕು. ಅದರ ಕಥೆ, ಚಿತ್ರಕಥೆ, ನಟನೆಯ ಗುಣಮಟ್ಟ, ಕ್ಲೈಮ್ಯಾಕ್ಸ್​ಗಳ ಬಗ್ಗೆ ರಿವ್ಯೂ ನೀಡಬೇಕು. ಅದರ ಜತೆ ಅವರಿಗೆ ಪಿಜ್ಜಾವನ್ನೂ ನೀಡಲಾಗುತ್ತದೆ. ಆ ಪಿಜ್ಜಾದ ಗುಣಮಟ್ಟವನ್ನೂ ಪರಿಶೀಲಿಸಿ ವರದಿ ನೀಡಬೇಕು. ಈ ಕೆಲಸಕ್ಕೆ ಸಂಸ್ಥೆ 500 ಡಾಲರ್​ ಅಂದರೆ ಸುಮಾರು 36 ಸಾವಿರ ರೂಪಾಯಿ ನೀಡುವುದಾಗಿ ಹೇಳಿಕೊಂಡಿದೆ.

ಈ ವಿಚಿತ್ರ ಕೆಲಸದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಬೋನಸ್​ ಫೈಂಡರ್​ ಅಧಿಕೃತ ವೆಬ್​ಸೈಟ್​ನಲ್ಲಿ ನೋಡಿ ತಿಳಿದುಕೊಳ್ಳಬಹುದು. ನೀವೂ ಅರ್ಜಿ ಸಲ್ಲಿಸಬಹುದು. ಅದೃಷ್ಟ ನಿಮ್ಮದಾಗಿದ್ದರೆ ಸಂಸ್ಥೆಯ ಕೆಲಸಕ್ಕೆ ನೀವೇ ಆಯ್ಕೆಯಾದರೂ ಆಗಬಹುದು. (ಏಜೆನ್ಸೀಸ್​)