Divorce Case: ದೈಹಿಕ ಸಂಬಂಧ ನಿರಾಕರಿಸುವುದರ ಜೊತೆಗೆ ಅನೈತಿಕ ಸಂಬಂಧಗಳಿವೆ ಎಂದು ಸ್ನೇಹಿತರು, ಹೆತ್ತವರು ಮತ್ತು ಸಹೋದ್ಯೋಗಿಗಳ ಮುಂದೆ ಶಂಕಿಸಿ, ಅವಮಾನಿಸುವುದು ಕ್ರೌರ್ಯಕ್ಕೆ ಸಮ. ಇದು ವಿಚ್ಛೇದನಕ್ಕೆ ಒಂದು ಬಲವಾದ ಆಧಾರ ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.
ಪತ್ನಿಯ ಚಿತ್ರಹಿಂಸೆಯಿಂದ ತೀವ್ರ ಮನನೊಂದ ಪತಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ಕೌಟುಂಬಿಕ ನ್ಯಾಯಾಲಯವು, ವ್ಯಕ್ತಿಯ ಪರ ಆದೇಶ ನೀಡಿತ್ತು. ಆದರೆ, ಆತನ ಪತ್ನಿ ಫ್ಯಾಮಿಲಿ ಕೋರ್ಟ್ ಆದೇಶವನ್ನು ಪ್ರಶ್ನಿಸಿ, ವಿಚ್ಛೇದನ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಳು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯುವ ಮೂಲಕ ಮಹಿಳೆಗೆ ಭಾರೀ ಮುಖಭಂಗವನ್ನು ಉಂಟುಮಾಡಿದೆ.
ಪತಿಯ ವಿರುದ್ಧ ಮಹಿಳೆಯ ನಡವಳಿಕೆ ಕ್ರೌರ್ಯ ಎಂದು ಇಲ್ಲಿ ಅರ್ಥೈಸಿಕೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ಪೀಠವು ಹೇಳಿದೆ. ವಿಚ್ಛೇದನಕ್ಕಾಗಿ ವ್ಯಕ್ತಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೌಟುಂಬಿಕ ಕೋರ್ಟ್, ಪತಿಯ ಮನವಿಯಂತೆ ವಿಚ್ಛೇದನ ಅರ್ಜಿಗೆ ಅಸ್ತು ಎಂದಿತ್ತು. ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
2013ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಡಿಸೆಂಬರ್ 2014ರಲ್ಲಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದರು. 2015ರಲ್ಲಿ, ಪತ್ನಿಯ ಕ್ರೌರ್ಯಕ್ಕೆ ತುತ್ತಾದ ಗಂಡ, ಪುಣೆಯ ಕೌಟುಂಬಿಕ ನ್ಯಾಯಾಲಯದಲ್ಲಿ ತನಗೆ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ್ದ. ದೈಹಿಕ ಸಂಪರ್ಕಕ್ಕೆ ನಿರಾಕರಿಸುವುದು, ನಿನಗೆ ಇನ್ನೊಬ್ಬಳ ಜೊತೆ ಸಂಬಂಧವಿದೆ ಎಂದು ಶಂಕಿಸುವುದು ಮತ್ತು ಇದೇ ವಿಚಾರವನ್ನು ನನ್ನ ಕುಟುಂಬ, ಸ್ನೇಹಿತರು ಮತ್ತು ಉದ್ಯೋಗಿಗಳ ಮುಂದೆ ಹೇಳಿ ಮುಜುಗರಕ್ಕೀಡು ಮಾಡುವುದು ಸಹಿಸಲಾಗದು ಎಂದು ಪತಿ ಅಳಲು ತೋಡಿಕೊಂಡಿದ್ದ. ಇದನ್ನು ಆಲಿಸಿದ ಫ್ಯಾಮಿಲಿ ಕೋರ್ಟ್, ಅರ್ಜಿದಾರನ ಪರ ತೀರ್ಪು ನೀಡಿತು.
ಮಹಿಳೆ ತನ್ನ ಅರ್ಜಿಯಲ್ಲಿ, ನನ್ನ ಅತ್ತೆ-ಮಾವ ಕಿರುಕುಳ ನೀಡಿದ್ದಾರೆ. ಆದರೆ, ಇಂದಿಗೂ ನನಗೆ ಗಂಡನ ಮೇಲೆ ಪ್ರೀತಿಯಿದೆ. ಹೀಗಾಗಿ ಈ ಸಂಬಂಧ ಮುರಿದುಕೊಳ್ಳಲು ನಾನು ಇಚ್ಛಿಸುವುದಿಲ್ಲ. ಕೌಟುಂಬಿಕ ನ್ಯಾಯಾಲಯ ನೀಡಿರುವ ವಿಚ್ಛೇದನ ಆದೇಶವನ್ನು ಬದಲಿಸುವಂತೆ ಮನವಿ ಸಲ್ಲಿಸಿದ್ದಳು. ವಾದ-ಪ್ರತಿವಾದ ಆಲಿಸಿದ ಬಾಂಬೆ ಹೈಕೋರ್ಟ್, ಪತಿಯ ಮನಸ್ಸಿಗೆ ನೋವುಂಟು ಮಾಡುವಂತೆ ಮಹಿಳೆ ನಡೆದುಕೊಂಡಿರುವುದು ಸ್ಪಷ್ಟ. ಆಕೆಯ ವರ್ತನೆಯಿಂದ ವ್ಯಕ್ತಿ ಮತ್ತು ಆತನ ಕುಟುಂಬಸ್ಥರಿಗೆ ತೀವ್ರ ಘಾಸಿಯಾಗಿದೆ. ದಂಪತಿಗಳ ನಡುವಿನ ದಾಂಪತ್ಯ ಸಂಬಂಧವನ್ನು ಸರಿಪಡಿಸುವ ಯಾವ ಸಾಧ್ಯತೆಗಳು ಇಲ್ಲಿಲ್ಲ ಎಂದು ಹೇಳಿದೆ,(ಏಜೆನ್ಸೀಸ್).