ನ್ಯೂಸ್

ಕದಂಬ ಗಾರ್ಡೇನಿಯಾ ಹೋಟೆಲ್‌ಗೆ ಬಾಂಬ್ ಬೆದರಿಕೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹೋಟೆಲ್‌ಗೆ ಬಾಂಬ್ ಬೆದರಿಕೆ ಪತ್ರ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಾಲಹಳ್ಳಿ 2ನೇ ಹಂತದ ಕದಂಬ ಹೋಟೆಲ್‌ಗೆ ಬೆದರಿಕೆ ಬಂದಿದ್ದು, ಈ ಬಗ್ಗೆ ಜಾಲಹಳ್ಳಿ ಠಾಣೆಗೆ ಏ.20 ಮತ್ತು 22ರಂದು ‘ಹೋಟೆಲ್‌ನಲ್ಲಿ ಬಾಂಬ್ ಇಡುವುದಾಗಿ’ ಕಿಡಿಗೇಡಿ ಪತ್ರ ಕಳುಹಿಸಿದ್ದ.

ಸೋಮವಾರ ಈ ಪತ್ರ ನೋಡಿ ಕೂಡಲೇ ಎಚ್ಚೆತ್ತ ಪೊಲೀಸರು, ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿ ಹುಸಿ ಬೆದರಿಕೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಭೀತಿಯ ವಾತಾವರಣ ನಿವಾರಣೆಯಾಗಿದೆ. ಕುಂದಲಹಳ್ಳಿ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯ ಮರೆಯುವ ಮುನ್ನವೇ ಮತ್ತೊಂದು ಜನಪ್ರಿಯ ಹೋಟೆಲ್‌ಗೆ ಬೆದರಿಕೆ ಪತ್ರ ಬಂದ ಸಂಗತಿ ಜನರಲ್ಲಿ ಆತಂಕಕ್ಕೂ ಕಾರಣವಾಗಿತ್ತು.

ಜಾಲಹಳ್ಳಿ ಠಾಣಾಧಿಕಾರಿ ಹೆಸರಿಗೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ಅಂಚೆ ಮೂಲಕ ಬಂದ ಪತ್ರವನ್ನು ಇನ್‌ಸ್ಪೆಕ್ಟರ್ ಓದಿದಾಗ ‘ನೀವು ಪೊಲೀಸರು ಸರಿಯಿಲ್ಲ. ಜನರ ನೋವಿಗೆ ಸ್ಪಂದಿಸುತ್ತಿಲ್ಲ. ಭ್ರಷ್ಟಾಚಾರ ಅತಿಯಾಗಿದೆ’ ಎಂದು ಉಲ್ಲೇಖವಾಗಿತ್ತು.

ಅಲ್ಲದೆ, ಜಾಲಹಳ್ಳಿ 2ನೇ ಹಂತದ ಕದಂಬ ಹೋಟೆಲ್‌ಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಹೋಟೆಲ್‌ಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಜತೆ ತೆರಳಿ ತೀವ್ರ ಶೋಧ ನಡೆಸಿದಾಗ ಇದೊಂದು ಹುಸಿ ಬೆದರಿಕೆ ಕರೆ ಎಂಬುದು ಗೊತ್ತಾಗಿದೆ. ಪತ್ರದ ಬರೆದ ಕಿಡಿಗೇಡಿ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.