ನ್ಯೂಸ್

ದೆಹಲಿಯ ವಿಮಾನ ನಿಲ್ದಾಣ ಹಾಗೂ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ; ಮುಂದುವರೆದ ತನಿಖೆ| bomb threat

ನವದೆಹಲಿ: ಇಂದು (ಸೆ.28) ದೆಹಲಿಯ ವಿಮಾನ ನಿಲ್ದಾಣಗಳು ಮತ್ತು ಶಾಲೆಗಳು ಸೇರಿದಂತೆ ಭಾರತದಾದ್ಯಂತ ಹಲವಾರು ಸ್ಥಳಗಳಿಗೆ ಇ-ಮೇಲ್​ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.

ದ್ವಾರಕಾದ ಸಿಆರ್‌ಪಿಎಫ್ ಪಬ್ಲಿಕ್ ಶಾಲೆ ಮತ್ತು ಕುತುಬ್ ಮಿನಾರ್ ಬಳಿಯ ಸರ್ವೋದಯ ವಿದ್ಯಾಲಯಗಳಿಗೆ ಬಾಂಬ್​ ಹಾಕುತ್ತೇನೆಂದು ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಶೋಧ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಪೊಲೀಸ್ ತಂಡಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ಘಟಕಗಳನ್ನು ನಿಯೋಜಿಸಲಾಗಿದೆ. ಅಂದಹಾಗೆ ಈ ತನಿಖೆಯಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂಬ ವರದಿಯಾಗಿದೆ ಎಂದು ದೆಹಲಿ ಅಗ್ನಿಶಾಮಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಷ್ಟ್ರ ರಾಜಧಾನಿಯ ಒಂದೆರಡು ಶಾಲೆಗಳು ಮತ್ತು ಇತರ ಸಂಸ್ಥೆಗಳಿಗೂ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಜಮ್ಮು ವಿಮಾನ ನಿಲ್ದಾಣ ಹಾಗೂ ದೆಹಲಿ ವಿಮಾನ ನಿಲ್ದಾಣಗಳಿಗೂ ಬಾಂಬ್​ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ. ಇನ್ನೂ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

(ಏಜೆನ್ಸೀಸ್)

ಅಂದಹಾಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮತ್ತು ಪೊಲೀಸರು ನಡೆಸಿದ ಸಂಪೂರ್ಣ ಶೋಧದ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಇಂದು ಬೆಳಗ್ಗೆ ಖಾಸಗಿ ವಿಮಾನಕ್ಕೆ ಇಮೇಲ್ ಬಂದಿದೆ ಮತ್ತು ಅದರ ಪ್ರಕಾರ, ಯಾವುದೇ ಸ್ಫೋಟಕ ವಸ್ತುವನ್ನು ಪತ್ತೆ ಹಚ್ಚಲು ಭದ್ರತಾ ಕವಾಯತು ನಡೆಸಲಾಯಿತು. ಆದರೆ ಈ ಇಮೇಲ್ ವಂಚನೆಯಾಧಾರಿತವಾಗಿರಬಹುದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.