ನ್ಯೂಸ್

ಡಿಸಿಎಂ ಡಿಕೆ ಶಿವಕುಮಾರ್ ಕಚೇರಿ ಸ್ಫೋಟಿಸುವುದಾಗಿ ಬಾಂಬ್​ ಬೆದರಿಕೆ ಸಂದೇಶ|Bomb Threat

ಬೆಂಗಳೂರು; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಇ-ಮೇಲ್ ಸಂದೇಶ ಬಂದಿದೆ. ನಂತರ ತೀವ್ರ ತಪಾಸಣೆ ನಡೆಸಲಾಗಿದ್ದು, ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಬಾಂಬ್​ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆ ದಳ ಸಿಬ್ಬಂದಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬೆದರಿಕೆ ಸಂದೇಶ ಎನ್ನಲಾಗಿದೆ.

ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಶನಿವಾರ (ಜು. 26) ಬೆಳಗ್ಗೆ 9 ಗಂಟೆ ಸುಮಾರಿಗೆ bhagwanthmann@yandex.com ಮೇಲ್‌ನಿಂದ ಬಾಂಬ್​ ಬೆದರಿಕೆ ಸಂದೇಶ ಬಂದಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ವಿಳಾಸಕ್ಕೆ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ವಿಮಾನ ನಿಲ್ದಾಣದ 2 ಟರ್ಮಿನಲ್‌ನಲ್ಲಿ ಸ್ಫೋಟಕ ಇಡಲಾಗಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ಬ್ಲಾಸ್ಟ್‌ ಆಗಲಿದೆ ಎಂದು ಬೆದರಿಕೆ ಹಾಕಲಾಗಿತ್ತು. ನಂತರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಕೊನೆಗೆ ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿದು ಬಂತು ಎಂದು ಮೂಲಗಳು ತಿಳಿಸಿವೆ.