ನ್ಯೂಸ್

Bomb threat | ರಾಜಸ್ಥಾನ, ಮಧ್ಯಪ್ರದೇಶ ರೈಲು ನಿಲ್ದಾಣ, ಧಾರ್ಮಿಕ ಸ್ಥಳಗಳಿಗೆ ಬಾಂಬ್ ಬೆದರಿಕೆ

ಜೈಪುರ: ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವು ರೈಲು ನಿಲ್ದಾಣಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬಾಂಬ್ ಸ್ಫೋಟಿಸುವುದಾಗಿ Bomb threat ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಅಂಚೆ ಮೂಲಕ ಬೆದರಿಕೆ ಪತ್ರವನ್ನು ರವಾನಿಸಲಾಗಿದೆ.

ಈ ಕುರಿತು ಹನುಮಾನ್‌ಗಢ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್​ವೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ಯಾರೆ ಲಾಲ್ ಮೀನಾ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 30ರಂದು ಗಂಗಾನಗರ, ಹನುಮಾನ್‌ಗಢ, ಜೋಧ್‌ಪುರ, ಬಿಕಾನೇರ್, ಕೋಟಾ, ಬುಂಡಿ, ಉದಯಪುರ, ಜೈಪುರದ ರೈಲು ನಿಲ್ದಾಣ ಮತ್ತು ಇತರೆ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಪತ್ರ ಜೈಷ್-ಎ-ಮೊಹಮ್ಮದ್ ಹೆಸರಿನಲ್ಲಿದೆ ಎಂದು ಎಸ್ಪಿ ಮೀನಾ ತಿಳಿಸಿದ್ದಾರೆ.

ನವೆಂಬರ್ 2 ರಂದು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಧಾರ್ಮಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದೂ ಪೊಲೀಸ್ ವರಿಷ್ಠಾಧಿಕಾರಿ ಪ್ಯಾರೆ ಲಾಲ್ ಮೀನಾ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ಸ್ಥಳೀಯ ಪೊಲೀಸರು ಮತ್ತು ಬಿಎಸ್‌ಎಫ್ ಸಿಬ್ಬಂದಿ ಬಾಂಬ್​ಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂಬಂಧ ಗ್ರಾಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆದರಿಕೆ ಪತ್ರ ಕಳುಹಿಸಿದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.