Vikram Bhatt 
ನ್ಯೂಸ್

Vikram Bhatt - 70 ದಿನ ಜೈಲುವಾಸ, ಸಾವಿನ ದರ್ಶನವಾಯ್ತು

Vikram Bhatt -
ಬಾಲಿವುಡ್​ನ "ಹಾರರ್​ ಸ್ಪೆಷಲಿಸ್ಟ್​' ಎಂದೇ ಹೆಸರು ಮಾಡಿರುವವರು ನಿರ್ದೇಶಕ ವಿಕ್ರಮ್​ ಭಟ್​. "ಗುಲಾಮ್​', "ಹೇಟ್​ ಸ್ಟೋರಿ' ಸರಣಿ, "ರಾಜ್​' ಸರಣಿ ಸೇರಿ 35ಕ್ಕೂ ಹೆಚ್ಚು ಸಿನಿಮಾ ನಿರ್ದೇಶಿಸಿರುವ, 15 ಚಿತ್ರಗಳನ್ನು ನಿರ್ಮಿಸಿರುವ ಖ್ಯಾತಿ ಅವರಿಗೆ ಸಲ್ಲುತ್ತದೆ. ಇಂತಹ ವಿಕ್ರಮ್​ ಮತ್ತು ಪತ್ನಿ ಪೀತಾಂಬರಿ ವಿರುದ್ಧ ಬಯೋಪಿಕ್​ ನಿರ್ಮಿಸುವ ಸಂಬಂಧ ಹಣ ಪಡೆದು ₹30 ಕೋಟಿ ವಂಚಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಜತೆಗೆ ಕಳೆದ ಡಿಸೆಂಬರ್​ನಲ್ಲಿ ಪತಿ, ಪತ್ನಿ ಇಬ್ಬರನ್ನೂ ಬಂಧಿಸಲಾಗಿತ್ತು. 70 ದಿನಗಳ ಜೈಲುವಾಸದ ಬಳಿಕ ಈ ದಂಪತಿ ಬೇಲ್​ ಪಡೆದು ಫೆಬ್ರವರಿಯಲ್ಲಿ ಬಿಡುಗಡೆಯಾದರು. ಇದೇ ಮೊದಲ ಬಾರಿಗೆ ಜೈಲು ದಿನಗಳ ಬಗ್ಗೆ ಮೌನ ಮುರಿದಿರುವ ವಿಕ್ರಮ್​ ಭಟ್​, "ನಾನಿದ್ದ ಬ್ಯಾರಕ್​ನಲ್ಲಿ ಸುಮಾರು 80 ಜನ ಕೈದಿಗಳಿದ್ದರು. ಎಲ್ಲರೂ ನನ್ನನ್ನು ಭೀಷ್ಮ ಪಿತಾಮಹ ಎನ್ನುತ್ತಿದ್ದರು. ನನಗೆ ಯಾವ ಕೆಲಸ ಮಾಡಲೂ ಬಿಡುತ್ತಿರಲಿಲ್ಲ. ನಾನಿದ್ದಲ್ಲಿಗೇ ಊಟ ತಂದುಕೊಡುತ್ತಿದ್ದರು, ಬಟ್ಟೆ ಒಗೆದುಕೊಡುತ್ತಿದ್ದರು. ಆದರೆ, ಪ್ರತಿ ರಾತ್ರಿ ಎಲ್ಲರೂ ಕಥೆ ಹೇಳುವಂತೆ ಬಂದು ಕುಳಿತುಬಿಡುತ್ತಿದ್ದರು. ನನಗೆ ಹಲವು ವರ್ಷಗಳಿಂದ ಚಳಿಗಾಲದಲ್ಲಿ ಕೀಲು ನೋವು, ಸ್ನಾಯು ಸೆಳೆತವಾಗುತ್ತಿರುತ್ತದೆ. ಆ ನೋವುಗಳ ಜತೆಗೆ ಜೈಲಿನಲ್ಲಿರುವಾಗ ಜಾಂಡೀಸ್​ ಕೂಡ ಬಂದಿತ್ತು. ಆ ಸಮಯದಲ್ಲಿ ನಾನು ಬದುಕುವುದೇ ಇಲ್ಲ ಅಂತನ್ನಿಸಿದ್ದೂ ಇದೆ. ಸಹಕೈದಿಗಳು ತಮ್ಮ ರಗ್ಗುಗಳನ್ನು ನೀಡಿ ನನ್ನನ್ನು ರಸಿದರು. ನಾನು ಜೈಲು ಸಿಬ್ಬಂದಿಯನ್ನು ಅದೆಷ್ಟು ಬಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದರೂ, ಅವರು ಗಮನ ಕೊಡಲಿಲ್ಲ. ನನಗೆ ಹಿಂದೊಮ್ಮೆ ಜಾಂಡೀಸ್​ ಬಂದಿದ್ದಾಗ ಅನುಸರಿಸಿದ ಆಹಾರ ಕ್ರಮವನ್ನೇ ಈ ಬಾರಿಯೂ ಅನುಸರಿಸಿದೆ. ಧ್ಯಾನ ಮಾಡುತ್ತಿದ್ದೆ, ದೇವರ ಪ್ರಾರ್ಥನೆ ಮೂಲಕ ಹೆಚ್ಚು ಸಮಯ ಕಳೆಯುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ ವಿಕ್ರಮ್​ ಭಟ್​ ನಿರ್ದೇಶನದ "ಹಾಂಟೆಡ್​ 3ಡಿ' ಇದೇ 12ರಂದು ರಿಲೀಸ್​ ಆಗಲಿದೆ. &ಏಜೆನ್ಸೀಸ್​