ಮುಂಬೈ: ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ನೋಡಿ ಶ್ರೇಯಸ್ ಅಭಿಮಾನಿಗಳು ಹಾಗೂ ಹಲವರು ಭಾವುಕರಾಗಿದ್ದಾರೆ. ಪ್ರತಿಯೊಬ್ಬರು ನಟನ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಈ ವದಂತಿ ನೋಡಿದ ಬಳಿಕ ಸ್ವತಃ ಶ್ರೇಯಸ್ ತಲ್ಪಾಡೆ ಅವರೆ ಪ್ರತಿಕ್ರಿಯಿಸಿದ್ದು ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ಶ್ರೇಯಸ್ ತಲ್ಪಾಡೆ ಅವರಿಗೆ ಹೃದಯಾಘಾತವಾಗಿತ್ತು. ಆದರೆ ಸೋಮವಾರ(ಆಗಸ್ಟ್ 19) ಮಧ್ಯಾಹ್ನ ಶ್ರೇಯಸ್ ಇಹಲೋಕ ತ್ಯಜಿಸಿದ್ದಾರೆ ಎಂಬ ವದಂತಿ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ಬಗ್ಗೆ ಸ್ವತಃ ಶ್ರೇಯಸ್ ತಲ್ಪಾಡೆ ಪ್ರತಿಕ್ರಿಯಿಸಿದ್ದು ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ಸುದೀರ್ಘವಾಗಿ ಬರೆದಿರುವ ಅವರು ನಾನು ಜೀವಂತವಾಗಿ, ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ನಿಧನದ ಬಗ್ಗೆ ವೈರಲ್ ಆಗಿರುವ ಪೋಸ್ಟ್ ಬಗ್ಗೆ ತಿಳಿದು ಬೇಸರವಾಗಿದೆ. ತಮಾಷೆಯಾಗಿ ಪ್ರಾರಂಭವಾದದ್ದು ಈಗ ಅನಗತ್ಯ ಆತಂಕವನ್ನು ಸೃಷ್ಟಿಸುತ್ತಿದೆ. ಇದು ನನ್ನ ಕಾಳಜಿ ವಹಿಸುವ ಜನರ ಭಾವನೆಗಳೊಂದಿಗೆ ಆಟವಾಡಿದಂತಿದೆ. ವಿಶೇಷವಾಗಿ ನನ್ನ ಕುಟುಂಬ ಮತ್ತು ಪ್ರತಿದಿನ ಶಾಲೆಗೆ ಹೋಗುವ ನನ್ನ ಕಿರಿಯ ಮಗಳು ಭಾವನೆ ಜತೆ ಆಟವಾಡಿದ್ದಾರೆ. ಈಗಾಗಲೇ ಅವರು ನನ್ನ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಈ ಸುದ್ದಿ ಅವರ ಭಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದ್ದಾರೆ.
ನನ್ನ ಪ್ರೀತಿಪಾತ್ರರಿಗೆ ನೋವನ್ನುಂಟು ಮಾಡುವ ಹಾಗೂ ಅವರ ಭಾವನೆಗಳಿಗೆ ಧಕ್ಕೆ ತರವ ವಿಚಾರವನ್ನು ವಿನೋದಕ್ಕಾಗಿ ಬಳಸುವುದು ನನಗೆ ನಿರಾಶೆಯನ್ನುಂಟು ಮಾಡಿದೆ. ನೀವು ಇಂತಹ ವದಂತಿಗಳನ್ನು ಹರಡಿದಾಗ, ಅದು ವ್ಯಕ್ತಿಯನ್ನು ಮಾತ್ರವಲ್ಲದೆ ಅವರ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳು ಇಂಥಾ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಿಲ್ಲ. (ಏಜೆನ್ಸೀಸ್)