ನ್ಯೂಸ್

ಸುರಕ್ಷತೆ ಜತೆಗೆ ಆಕರ್ಷಣೆಯನ್ನೂ ಹೆಚ್ಚಿಸುವ ಪಾರದರ್ಶಕ ಬಯೋಸೆಕ್ಯೂರಿಟಿ ರೇನ್​ಕೋಟ್​

ನವದೆಹಲಿ: ಕೋವಿಡ್​-19 ಪಿಡುಗು ಬೊಲಿವಿಯಾದ ಲೈಂಗಿಕ ಕಾರ್ಯಕರ್ತೆಯರ ಜೀವನವನ್ನು ದುಸ್ತರಗೊಳಿಸಿದೆ. ಒಂದೆಡೆ ಲಾಕ್​ಡೌನ್​ನಿಂದಾಗಿ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಅವರನ್ನು ಆಕರ್ಷಿಸುವ ಜತೆಗೆ ತಮ್ಮ ಸುರಕ್ಷತೆಗೂ ಒತ್ತು ನೀಡಬೇಕಾದ ಅನಿವಾರ್ಯತೆ ಬೊಲಿವಿಯಾದ ಸಹಕಾರಿ ವೇಶ್ಯಾವಾಟಿಕೆಯಲ್ಲಿ ಇರುವ ಲೈಂಗಿಕ ಕಾರ್ಯಕರ್ತೆಯರದ್ದಾಗಿದೆ.

ಇದೀಗ ಅವರು ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಆರಂಭಿಸಿದ್ದಾರೆ. ಮೈಗೆ ಅಂಟಿಕೊಳ್ಳುವಂಥ, ಪಾರದರ್ಶಕವಾದ ಬಯೋಸೆಕ್ಯೂರಿಟಿ ಸೂಟ್​ಗಳಧಾರಣೆ ಆ ಪರಿಹಾರಗಳಲ್ಲಿ ಒಂದಾಗಿದೆ. ಬ್ಲೀಚಿಂಗ್​ ದ್ರಾವಣ, ಗ್ಲೋವ್ಸ್​ಗಳನ್ನು ಕೂಡ ಬಳಸುವ ಮೂಲಕ ತಮ್ಮನ್ನು ತಾವು ಸುರಕ್ಷಿತಗೊಳಿಸಿಕೊಳ್ಳುತ್ತಿದ್ದಾರೆ.

ಬೊಲಿವಿಯಾದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ ಮಾನ್ಯತೆ ಹೊಂದಿದೆ. ಇದೊಂದು ವೃತ್ತಿಯೆಂದು ಅಲ್ಲಿ ಪರಿಗಣಿಸಲಾಗಿದೆ. ಹಾಗಾಗಿ ಅಲ್ಲಿನ ವೇಶ್ಯೆಯರ ಅಡ್ಡಗೆ ಭೇಟಿ ನೀಡುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಕೋವಿಡ್​-19 ಪಿಡುಗಿನ ಭೀತಿ ಈ ಅಡ್ಡೆಗಳನ್ನೂ ಆವರಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ತಮ್ಮ ಸುರಕ್ಷತೆಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಇದಕ್ಕೆ ಪೂರಕವಾಗಿ 30 ಪುಟಗಳ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಬೊಲಿವಿಯಾದ ರಾತ್ರಿ ಕಾರ್ಮಿಕರ ಸಂಘಟನೆ (ಒಟಿಎನ್​) ಸ್ಕಿನ್​ಟೈಟ್​ ಬಯೋಸೆಕ್ಯೂರಿಟಿ ಸೂಟ್​ಗಳಧಾರಣೆಯನ್ನು ಕಡ್ಡಾಯಗೊಳಿಸಿದೆ.

ಗ್ರಾಹಕರನ್ನು ಆಕರ್ಷಿಸಲು ತೊಡೆ ಕಾಣಿಸುವಂತೆ ಧಿರಿಸು ಧರಿಸುವ ಜತೆಗೆ ಮುಖಕ್ಕೆ ಪಾರದರ್ಶಕವಾದ ಕಾಗದದ ಮಾಸ್ಕ್​, ಪ್ಲಾಸ್ಟಿಕ್​ ವೈಸರ್​, ಗ್ಲೋವ್​ಗಳು ಮತ್ತು ಪಾರದರ್ಶಕ ರೇನ್​ಕೋಟ್​ ಧರಿಸಿ ಲೈಂಗಿಕ ಕಾರ್ಯಕರ್ತೆಯೊಬ್ಬರು ಪ್ರದರ್ಶನ ನೀಡಿದರು. ಜತೆಗೆ ಪೋಲ್​ ಡಾನ್ಸ್​ ಮಾಡುವ ಮುನ್ನ ಅದನ್ನು ಬ್ಲೀಚಿಂಗ್​ ದ್ರಾವಣ ಹಾಕಿ ಸ್ವಚ್ಛಗೊಳಿಸುವ ಪ್ರಾತ್ಯಕ್ಷಿಕೆಯನ್ನೂ ನೀಡಿದರು.

ಬಯೋಸೆಕ್ಯೂರಿಟಿ ಸೂಟ್​ ನೈಸರ್ಗಿಕವಾದ ನೋಟವನ್ನೇ ಒದಗಿಸುತ್ತದೆ. ಜತೆಗೆ ಕರೊನಾ ಸೋಂಕಿನಿಂದ ನಮಗೆ ರಕ್ಷಣೆಯನ್ನೂ ಒದಗಿಸುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಲೈಂಗಿಕ ಕಾರ್ಯಕರ್ತೆಯರು ಹೇಳಿಕೊಂಡಿದ್ದಾರೆ.