ನ್ಯೂಸ್

ಬೋಯಿಂಗ್​​​​ ಕ್ರಿಮಿನಲ್ ವಂಚನೆ; 243.6 ಮಿಲಿಯನ್ ಡಾಲರ್​ ದಂಡ ವಿಧಿಸಿದ ನ್ಯಾಯಾಲಯ

ವಾಷಿಂಗ್ಟನ್​ ಡಿಸಿ: ಬೋಯಿಂಗ್ ಮ್ಯಾಕ್ಸ್ ವಿಮಾನಗಳ ಎರಡು ಅಪಘಾತಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ವಂಚನೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅಮೆರಿಕ ನ್ಯಾಯಾಂಗ ಇಲಾಖೆಯು ಕಂಪನಿಯನ್ನು ದೋಷಿ ಎಂದು ಘೋಷಿಸಿದೆ. ಬೋಯಿಂಗ್ ಕೂಡ ತಪ್ಪಿತಸ್ಥ ಮನವಿಯನ್ನು ಒಪ್ಪಿಕೊಂಡಿದೆ ಎಂದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಬೋಯಿಂಗ್ 243.6 ಮಿಲಿಯನ್ ಡಾಲರ್​​ ಕ್ರಿಮಿನಲ್ ದಂಡವನ್ನು ಪಾವತಿಸುತ್ತದೆ ಎಂದು ನ್ಯಾಯಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಆರೋಪವು 2018ರಲ್ಲಿ ಮತ್ತು ಐದು ತಿಂಗಳ ನಂತರ ಅಂದರೆ 2019ರಲ್ಲಿ ಇಂಡೋನೇಷ್ಯಾ ಮತ್ತು ಇಥಿಯೋಪಿಯಾದಲ್ಲಿ ಸಂಭವಿಸಿದ ಎರಡು 737 MAX ಕ್ರ್ಯಾಶ್‌ಗಳಿಗೆ ಸಂಬಂಧಿಸಿದೆ, ಈ ಅಪಘಾತದಲ್ಲಿ 346 ಜನರು ಮೃತಪಟ್ಟಿದ್ದರು. ಅಪಘಾತಗಳ ನಂತರ ಕಂಪನಿಯನ್ನು ಸುಧಾರಿಸಲು ಮಾಡಿದ ಒಪ್ಪಂದವನ್ನು ಬೋಯಿಂಗ್ ಉಲ್ಲಂಘಿಸಿದೆ ಎಂದು ಯುಎಸ್​​​ ನ್ಯಾಯಾಂಗ ಇಲಾಖೆ (DoJ) ಹೇಳಿದೆ. ಹಾಗೂ ವಿಮಾನ ತಯಾರಕ ಕಂಪನಿಯು 243.6 ಮಿಲಿಯನ್ ಡಾಲರ್​ ದಂಡವನ್ನು ಪಾವತಿಸಲು ಒಪ್ಪಿಕೊಂಡಿದೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಕಂಪನಿಯು ಮೂರು ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಕ್ರಮದಿಂದ ರಕ್ಷಿಸಲ್ಪಟ್ಟ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಸರ್ಕಾರವು ಕಂಡುಹಿಡಿದಿದೆ. ಒಪ್ಪಂದದ ಪ್ರಕಾರ, ಮೂರು ವರ್ಷಗಳವರೆಗೆ ಬೋಯಿಂಗ್‌ನ ಸುರಕ್ಷತೆ ಮತ್ತು ಗುಣಮಟ್ಟದ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಸ್ವತಂತ್ರ ಮಾನಿಟರ್ ಅನ್ನು ಗೊತ್ತುಪಡಿಸಲಾಗುತ್ತದೆ. ಇದರಡಿಯಲ್ಲಿ ಬೋಯಿಂಗ್ ತನ್ನ ಅನುಸರಣೆ ಮತ್ತು ಸುರಕ್ಷತಾ ಕಾರ್ಯಕ್ರಮಗಳಲ್ಲಿ ಕನಿಷ್ಠ 455 ಮಿಲಿಯನ್ ಡಾಲರ್​ ಹೂಡಿಕೆ ಮಾಡುತ್ತದೆ ಎಂಬುದಾಗಿತ್ತು. ಇದನ್ನು ಅನುಸರಿಸಿದ್ದರೆ ಕಂಪನಿಯು ಯಾವುದೇ ದಂಡವನ್ನು ಪಾವತಿಸುವಂತಿರಲಿಲ್ಲ. ಆದರೆ ಬೋಯಿಂಗ್​ ಈ ಒಪ್ಪಂದವನ್ನು ಉಲ್ಲಂಘಿಸಿದೆ ಎನ್ನಲಾಗಿದೆ.

ಯುಎಸ್​​ ನ್ಯಾಯ ಇಲಾಖೆಯ ಈ ನಿರ್ಧಾರದಿಂದ ಸಂತ್ರಸ್ತರ ಕುಟುಂಬಗಳು ತೃಪ್ತರಾಗಿಲ್ಲ. ಸುಮಾರು ಐದು ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಇದನ್ನು 'ಸ್ವೀಟ್ ಹಾರ್ಟ್ ಡೀಲ್' ಎಂದು ಟೀಕಿಸಿದ್ದಾರೆ. ಇದು ಬೋಯಿಂಗ್‌ಗೆ ಸಾವಿನ ಸಂಪೂರ್ಣ ಹೊಣೆಗಾರಿಕೆಯನ್ನು ತಪ್ಪಿಸಲು ಅನುವು ಮಾಡಿಕೊಡುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​​​)