ಮುಂಬೈ: ಬಾಲಿವುಡ್ ಅಂಗಳದಲ್ಲಿ ಸದ್ಯ 'ಅನಿಮಲ್' ಭಾರೀ ಘರ್ಜಿಸುತ್ತಿದ್ದು, ಶೀಘ್ರವೇ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆಯಲು ಸಿದ್ಧವಾಗುತ್ತಿದೆ. ಈ ಮಧ್ಯೆ ಚಿತ್ರದ ಬಗ್ಗೆ ಮಾತನಾಡಿದ ನಟ ಬಾಬಿ ಡಿಯೋಲ್ ಇಬ್ಬರು ಸ್ಟಾರ್ ನಟರ ಹೆಸರನ್ನು ಉಲ್ಲೇಖಿಸಿ, ಇವರೇ ನನ್ನ ನೆಚ್ಚಿನ ಕಲಾವಿದರು ಎಂದು ಹೇಳಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಸದ್ಯ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್' ಮುಂಚೂಣಿಯಲ್ಲಿದೆ.
ಈ ಚಿತ್ರವು ಇದೇ ಡಿಸೆಂಬರ್ 1, 2023 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ತಮ್ಮ ಸಿನಿಮಾದ ಕೆಲಸಗಳಲ್ಲಿ ನಿರತರಾಗಿರುವ ಬಾಬಿ ಡಿಯೋಲ್ ಇತ್ತೀಚೆಗೆ ನಡೆದ ಒಂದು ಸಂದರ್ಶನವೊಂದರಲ್ಲಿ ಇಬ್ಬರು ಬಾಲಿವುಡ್ ಸ್ಟಾರ್ ನಟರು ನನ್ನ ಫೇವರೆಟ್ ಎಂದು ಹೇಳಿಕೊಂಡಿದ್ದಾರೆ.
"ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನನ್ನ ಮೆಚ್ಚಿನ ನಟರು. ನಾನು ರಣಬೀರ್ ಅವರ ದೊಡ್ಡ ಅಭಿಮಾನಿ ಮತ್ತು ಪ್ರಸ್ತುತ ಅವರು ದೇಶದ ಅತ್ಯುತ್ತಮ ನಟ" ಎಂದು ಬಾಬಿ ಹೇಳಿದ್ದಾರೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿಕೊಂಡಿದ್ದು, ಟ್ರೇಲರ್ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಸದ್ಯ ಸಿನಿಮಾವನ್ನು ಥಿಯೇಟರ್ನಲ್ಲಿ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಸಿನಿಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಬಿಡುಗಡೆಯ ನಂತರ ತಿಳಿಯಲಿದೆ,(ಏಜೆನ್ಸೀಸ್).