ತುಮಕೂರಿನ ಅಮಾನಿಕೆರೆ ಅಂಗಳದಲ್ಲಿ ಆಯೋಜಿಸಿದ್ದ ಬೋಟ್​ ಪೆರೇಡ್​ನಲ್ಲಿ ಡಾ.ಜಿ.ಪರಮೇಶ್ವರ, ಶುಭಕಲ್ಯಾಣ್​, ಬಿ.ವಿ.ಅಶ್ವಿಜಾ ಮತ್ತಿತರರು ಇದ್ದರು. 
ನ್ಯೂಸ್

ಅಮಾನಿಕೆರೆಯಲ್ಲಿ ಗಮನಸೆಳೆದ ಬೋಟ್​ ಪೆರೇಡ್​

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಜಿ.ಪರಮೇಶ್ವರ ಭಾಗಿ
  • ಡಾ.ಅಂಬೇಡ್ಕರ್​ ಜಯಂತಿ ಅಂಗವಾಗಿ ಆಯೋಜನೆ
ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಅಂಗವಾಗಿ "ಸರ್ವರಿಗೂ ಅಂಬೇಡ್ಕರ್​' ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ತುಮಕೂರಿನ ಅಮಾನಿಕೆರೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಬೋಟ್​ ಪರೇಡ್​ ನಗರವಾಸಿಗಳ ಗಮನ ಸೆಳೆಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಅಂಬೇಡ್ಕರ್​, ಜಗಜೀವನ್​ ರಾಂ ಜೀವನ ಚರಿತ್ರೆಯನ್ನೊಳಗೊಂಡ ಟ್ಯಾಬ್ಲೋಗಳ ಮೆರವಣಿಗೆ ನಂತರ ಅಮಾನಿಕೆರೆಯಲ್ಲಿ ಬೋಟ್​ ಪರೇಡ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಮಂಗಳವಾರ ಸಂಜೆ ಚಾಲನೆ ನೀಡಿದರು.
ಡಾ.ಬಿ.ಆರ್​.ಅಂಬೇಡ್ಕರ್​ ಹಾಗೂ ಡಾ.ಬಾಬು ಜಗಜೀವನ್​ ರಾಂ ಜಯಂತಿ ಅಂಗವಾಗಿ ವಿನೂತನ ಈವೆಂಟ್​ ಜಿಲ್ಲಾಡಳಿತ ಹಮ್ಮಿಕೊಂಡಿದ್ದು ದೇಶದ ಅಭಿವೃದ್ಧಿಗೆ ದಾರಿ ದೀಪವಾಗಿರುವ ಮಹಾನಾಯಕರನ್ನು ಈ ಮೂಲಕ ಸ್ಮರಿಸುವ ಕೆಲಸ ಮಾಡಲಾಗಿದೆ ಎಂದರು.
ಅಂಬೇಡ್ಕರ್​ ಜಯಂತಿ ಕೇವಲ ಸಾಂಕೇತಕವನ್ನಾಗಿಸದೆ ಇಡೀ ದಿನ ಅಂಬೇಡ್ಕರ್​ ಸ್ಮರಣೆ ಜತೆಗೆ ಅವರ ಜೀವನ ಚರಿತ್ರೆಯನ್ನು ಎಲ್ಲರಿಗೂ ತಿಳಿಸುವ ಉದ್ದೇಶ ಹೊಂದಲಾಗಿದೆ. ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆಯಲ್ಲಿ ಅಂಬೇಡ್ಕರ್​, ಜಗಜೀವನ್​ ರಾಂ ಭಾವಚಿತ್ರವನ್ನು ಹೊತ್ತ ಬೋಟ್​ ಪೆರೇಡ್​ ಗಮನ ಸೆಳೆದಿದೆ, ಇದೊಂದು ವಿಭಿನ್ನ ಪ್ರಯತ್ನವಾಗಿದೆ ಎಂದರು.
ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಒಳಗೊಂಡ ಗಣ್ಯರ ತಂಡದ ದೀಪಾಲಂಕೃತ ದೊಡ್ಡ ಬೋಟ್​ ಅದನ್ನು ಹಿಂಬಾಲಿಸುವ 6&8 ಜನ ಕೂರುವ ಸಾಮರ್ಥ್ಯದ ಬೋಟುಗಳು, 8 ತೆಪ್ಪಗಳು ಹಾಗೂ 4 ಪೆಡಲ್​ ಬೋಟುಗಳು ಪೆರೇಡ್​ನಲ್ಲಿ ಭಾಗವಹಿಸಿದ್ದವು. ಸಂಜೆ 6.30 ರಿಂದ 7.15ರವರೆಗೆ ನಡೆದ ಪೆರೇಡ್​ ನಗರವಾಸಿಗಳ ಗಮನ ಸೆಳೆಯಿತು.