ನ್ಯೂಸ್

ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿ ಸಾವು : ಹತ್ತು ದಿನಗಳ ಅಂತರದಲ್ಲಿ ಮೂರನೇ ಬಲಿ ಇದು

ಮಂಜುನಾಥ.ಕೆ

ಬೆಂಗಳೂರು : ಬಿಎಂಟಿಸಿ ಬಸ್ ಹರಿದು ಖಾಸಗಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿರುವ ಪ್ರಕರಣ ಯಶವಂತಪುರದ ಮಾರಪ್ಪನಪಾಳ್ಯ ರಸ್ತೆಯ ಹೂವಿನ ಮಾರ್ಕೆಟ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಕಮಲಾನಗರದ ನಿವಾಸಿಯಾದ ಗಂಗಾಧರ್ (೨೧) ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿ. ನಗರದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ೭ ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಿಖಿತ್ ಮತ್ತು ಗಂಗಾಧರ್ ಕಮಲಾನಗರದ ನಿವಾಸಿಗಳಾಗಿದ್ದು, ಲಿಖಿತ್ ದ್ವಿಚಕ್ರ ವಾಹನದ ಸವಾರಿ ಮಾಡುತ್ತಿದ್ದರೆ ಗಂಗಾಧರ್ ಹಿಂಬದಿ ಕುಳಿತ್ತಿದ್ದ. ಇಬ್ಬರು ಎಚ್‌ಎಎಲ್ನಲ್ಲಿ ಇಂಟರ್‌ಶಿಪ್ ಮಾಡುತ್ತಿದ್ದರು. ಎಂದಿನಂತೆ ಎಚ್‌ಎಎಲ್‌ಗೆ ಹೋಗಲು ತಮ್ಮ ನಿವಾಸದಿಂದ ಹೊರಟಿದ್ದರು. ಮಾರ್ಗಮಧ್ಯೆ ಯಶವಂತಪುರದ ಮಾರಪ್ಪನಪಾಳ್ಯ ರಸ್ತೆಯ ಹೂವಿನ ಮಾರ್ಕೆಟ್ ಸಮೀಪ ಬೆಳಗ್ಗೆ ೭.೩೦ ರ ಸುಮಾರಿಗೆ ಬಿಎಂಟಿಸಿ ಬಸ್ ಇವರ ದ್ವಿಚಕ್ರ ವಾಹನದ ಕನ್ನಡಿಗೆ ತಗುಲಿದ್ದು ಪರಿಣಾಮ ಸವಾರ ಲಿಖಿತ್ ಬಲಭಾಗಕ್ಕೆ ಬಿದ್ದಿದ್ದು, ಹಿಂಬದಿ ಸವಾರ ಗಂಗಾಧರ್ ಎಡಭಾಗದಲ್ಲಿ ಬಿದ್ದಿದ್ದು, ಈ ವೇಳೆ ಬಸ್‌ನ ಹಿಂಬದಿ ಚಕ್ರ ಗಂಗಾಧರನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಯಶವಂತಪುರ ಸಂಚಾರ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್‌ಯನ್ನು ಜಪ್ತಿ ಮಾಡಿ ಚಾಲಕನನ್ನು ಬಂಧಿಸಿದ್ದಾರೆ. ಇಬ್ಬರು ಸವಾರರು ಘಟನಾ ವೇಳೆ ಹೆಲ್ಮೆಟ್ ಧರಿಸಿದ್ದರು ಆದರೆ ಎರಡು ಹೆಲ್ಮೆಟ್‌ಗಳು ಹೊಡೆದು ಹೋಗಿವೆ. ಸವಾರ ಲಿಖಿತ್ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೧೦ ದಿನಗಳ ಅಂತರದಲ್ಲಿ ಬಿಎಂಟಿಸಿಗೆ 3ನೇ ಬಲಿ:
ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಕಳೆದ ಹತ್ತು ದಿನಗಳಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದ್ದು. ಅ. ೫ರಂದು ಸಂಜೆ ಅಟ್ಟೂರಿನ ಮದರ್ ಡೈರಿ ಬಳಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬಿಎಂಟಿಸಿ ಬಸ್‌ಗೆ ಡಿಕ್ಕಿಯಾಗಿ ನೆಲಕ್ಕೆ ಬಿದ್ದ ಸ್ಕೂಟರ್ ಚಾಲಕ ಭರತ್ ರೆಡ್ಡಿ (೨೩)ಯ ಮೇಲೆ ಬಸ್ ಹರಿದಿತ್ತು. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಘಟನೆಯ ಕುರಿತು ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ್ದ ಘಟನೆ ಅ. ೯ ರಂದು ಕೂಡ್ಲು ಗೇಟ್ ಬಳಿಯ ಗಾರ್ವೆಬಾವಿಪಾಳ್ಯ ಜಂಕ್ಷನ್‌ನಲ್ಲಿ ನಡೆದಿತ್ತು. ದೊಡ್ಡಮ್ಮನ ಜತೆ ಸ್ಕೂಟರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂಬಂದಿಯಿಂದ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಅಯಾನ್ ಎಂಬ ಮೂರು ವರ್ಷದ ಮಗು ನೆಲಕ್ಕೆ ಬಿದ್ದಿತ್ತು. ಈ ವೇಳೆ ಬಸ್ ಚಕ್ರ ಹರಿದು ಮಗು ಮೃತಪಟ್ಟಿತ್ತು. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.