ನ್ಯೂಸ್

ಬಿಎಂಟಿಸಿ ಬಸ್ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯೋಧ ಚೇತನ್ ಸಾವು, ಮುಗಿಲು ಮುಟ್ಟಿದೆ ಪಾಲಕರ ಆಕ್ರಂದನ

ಕೋಲಾರ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೋಲಾರ ಮೂಲದ ಯೋಧ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ಯೋಧ ಚೇತನ್(22) ಮೃತರು. ಇವರ ತಂದೆ ಸುರೇಶ್ ನಿವೃತ್ತ ಯೋಧರು. ತಂದೆಯಂತೇ ತಾನೂ ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕೆಂದು ಮಹತ್ತರ ಆಸೆಯೊಂದಿಗೆ ಸೇನೆಗೆ ಸೇರಿದ್ದ ಚೇತನ್​, ಚೆನ್ನೈ ರೆಜಿಮೆಂಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ವರ್ಷ ಪೂರೈಸಿದ್ದ ಚೇತನ್, ರಜೆ ಮೇಲೆ ಊರಿಗೆ ಆಗಮಿಸಿದ್ದರು.

ಅ.7ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಳಿ ಚೇತನ್​ಗೆ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದಿದ್ದು. ಅಪಘಾತದಲ್ಲಿ ಗಾಯಗೊಂಡ ಚೇತನ್​ರನ್ನು ಯಲಹಂಕ ಬಳಿಯ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು(ಗುರುವಾರ) ಮೃತಪಟ್ಟರು. ಮಗನ ಸಾವಿನ ಸುದ್ದಿ ಕೇಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿದೆ.