ಬೆಂಗಳೂರು: ರಸ್ತೆಬದಿ ನಿಂತಿದ್ದ ಕಾರಿಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಗಲಗುಂಟೆ ನಿವಾಸಿ ದಾಸಪ್ಪ (44) ಮೃತ ಸವಾರ. ದ್ವಿಚಕ್ರ ವಾಹನದಲ್ಲಿ ಗುರುವಾರ ಮಧ್ಯಾಹ್ನ 2.45ರಲ್ಲಿ ತುಮಕೂರು ರಸ್ತೆ 8ನೇ ಮೈಲಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬಾಗಲಗುಂಟೆಗೆ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ದಾಸಪ್ಪ, ಕೆಲ ವರ್ಷಗಳಿಂದ ಕುಟುಂಬದೊಂದಿಗೆ ಬಾಗಲಗುಂಟೆಯಲ್ಲಿ ನೆಲೆಸಿದ್ದರು.ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಗಾರ್ಡ್ ಆಗಿದ್ದ ದಾಸಪ್ಪ, ಶುಕ್ರವಾರ ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು.
8ನೇ ಮೈಲಿ ಬಳಿ ಸರ್ವಿಸ್ ರಸ್ತೆ ಎಡಭಾಗದಲ್ಲಿ ಕಾರು ಪಾರ್ಕಿಂಗ್ ಮಾಡಲಾಗಿತ್ತು. ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ದಾಸಪ್ಪ ಕಾರನ್ನು ಗಮನಿಸದೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್‌ನ ಹಿಂದಿನ ಎಡಚಕ್ರ ದಾಸಪ್ಪ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸರ್ವಿಸ್ ರಸ್ತೆಯಲ್ಲಿ ಸಿಗ್ನಲ್ ಹಾಕದೆ ಕಾರು ನಿಲುಗಡೆ ಮಾಡಿದ್ದ ತಪ್ಪಿನಿಂದ ದಾಸಪ್ಪ ಗಮನಿಸದೆ ಗುದ್ದಿದ್ದಾರೆ. ಬಿಎಂಟಿಸಿ ಬಸ್ ಚಾಲಕ ವೇಗವಾಗಿ ಬಂದ ಕಾರಣಕ್ಕೆ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.