ಮುಂಬೈ: ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ. ಮುಂಬೈ ನಗರಾಡಳಿತವೂ ನಗರದಲ್ಲಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕರೊನಾ ಪಾಸಿಟಿವ್ ಬಂದಿದ್ದರೂ ಶೂಟಿಂಗ್ ನಡೆಸಿದ ಬಾಲಿವುಡ್ ನಟಿ ಗೌಹರ್ ಖಾನ್ ಮೇಲೆ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಕೇಸು ದಾಖಲಿಸಿದೆ.
ಇಶಕ್ಜಾದೆ, ಬದರಿನಾಥ್ ಕಿ ದುಲ್ಹನಿಯಾ ಮುಂತಾದ ಚಿತ್ರಗಳಿಂದ ಹೆಸರು ಮಾಡಿರುವ ಗೌಹರ್ ಖಾನ್ ಅವರ ವಿರುದ್ಧ ಬಿಎಂಸಿ, ನಗರದ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಸಲ್ಲಿಸಿದೆ. "ಖಾನ್ಗೆ ಕರೊನಾ ಸೋಂಕು ತಗುಲಿದ್ದು, ಅವರು ಮನೆಯಲ್ಲೇ ಕ್ವಾರಂಟೈನ್ನಲ್ಲಿರಬೇಕಿತ್ತು. ಆದರೆ ನಾವು ಅವರ ಮನೆಗೆ ಭೇಟಿ ನೀಡಿದಾಗ ಅವರು ಬಾಗಿಲು ತೆಗೆಯಲಿಲ್ಲ. ವಿಚಾರಿಸಿದಾಗ ಅವರು ಶೂಟಿಂಗ್ಗೆಂದು ಹೊರಹೋಗಿರುವುದು ತಿಳಿದುಬಂತು" ಎಂದು ಸಂಬಂಧಿತ ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.
ಕೋವಿಡ್ ನಿಯಮಾವಳಿಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸಿದರೆ ಬೆಲೆ ತೆರಬೇಕಾಗುತ್ತದೆ ಎಂದು ಬಿಎಂಸಿ ಹೇಳಿದೆ. ಈ ಕುರಿತು ಪಾಲಿಕೆ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಮಾಹಿತಿ ನೀಡಿದ್ದು, "ಕರೊನಾ ಪಾಸಿಟಿವ್ ಬಂದಾಗ ಪಾಲಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಬಾಲಿವುಡ್ ನಟಿಯ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ. ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ" ಎಂದಿದೆ.
"ನಗರದ ಸುರಕ್ಷತೆಯ ಬಗ್ಗೆ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ" ಎಂದಿರುವ ಬಿಎಂಸಿ, ಮುಂಬೈ ನಾಗರೀಕರಿಗೆ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ನಗರವು ಕರೊನಾ ವಿರುದ್ಧ ಜಯಿಸಲು ಸಹಕರಿಸಬೇಕಾಗಿ ಕೋರಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ