ನ್ಯೂಸ್

ಮಳೆ ಅವಾಂತರ: ಬೆಂಗಳೂರು - ಮೈಸೂರು ಪ್ರಯಾಣಿಕರು ಬದಲಿ ಮಾರ್ಗ ಬಳಸಿ

ಗಂಗಾಧರ ಬಿ ವಿ

ರಾಮನಗರ: ಜಿಲ್ಲೆಯಲ್ಲಿಯೂ ಮಳೆ ಅಬ್ಬರ ಹೆಚ್ಚಿದ್ದು, ಹಲವೆಡೆ ಕೆರೆ ಕಟ್ಟೆಗಳು ಕೋಡಿ ಒಡೆದಿವೆ. ಇದರ ಪರಿಣಾಮವಾಗಿ ಬೆಂಗಳೂರು – ಮೈಸೂರು ಹೆದ್ದಾರಿಗೂ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸ್​ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು ನಗರದ ವ್ಯಾಪ್ತಿಗೆ ಒಳಪಡುವ ಕುಂಬಗಳೂಡು, ಕ್ರೈಸ್ಟ್​ ಕಾಲೇಜು ಸುತ್ತ ಮುತ್ತಲ ಪ್ರದೇಶದಲ್ಲಿ ನೀರು ಹೆದ್ದಾರಿಗೆ ನುಗ್ಗಿದ್ದು, ಶನಿವಾರ ಬೆಳಿಗ್ಗೆ ಬೆಂಗಳೂರು – ಮೈಸೂರು ನಡುವಿನ ವಾಹನ ಸವಾರರು ಗಂಟೆ ಗಂಟೆ ಕಾಯುವಂತೆ ಅಗಿತ್ತು.

ಅಲ್ಲದೆ, ಅಲ್ಲಲ್ಲಿ ಹೆದ್ದಾರಿಯಲ್ಲಿಯೂ ಮಳೆ ನೀರು ನುಗ್ಗಿದ ಪರಿಣಾಮ ಉಂಟಾಗಿರುವ ಸಮಸ್ಯೆಗಳನ್ನು ಪರಿಹಾರ ಮಾಡಲು ಹೆದ್ದಾರಿ ಪ್ರಾಧಿಕಾರದಿಂದ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು – ಮೈಸೂರು ನಡುವೆ ಸಂಚಾರ ಮಾಡುವ ವಾಹನ ಸವಾರರು ಮೂರು ದಿನಗಳ ಬದಲಿ ಮಾರ್ಗ ಬಳಕೆಗೆ ಮುಂದಾಗುವಂತೆ ಜಿಲ್ಲಾ ಪೊಲೀಸರು ಸೂಚನೆ ನೀಡಿದ್ದಾರೆ.

ಬದಲಿ ಮಾರ್ಗ: ಮೈಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಳೂರಿನಿಂದ ಮೈಸೂರಿಗೆ ತೆರಳು ಎರಡು ಬದಲಿ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದಾರೆ. ಬೆಂಗಳೂರು – ಕನಕಪುರ  ಮಾರ್ಗವಾಗಿ ಮೈಸೂರಿಗೆ ಹಾಗು ಬೆಂಗಳೂರು – ಕುಣಿಗಲ್​ ಮಾರ್ಗವಾಗಿ ಮೈಸೂರಿಗೆ ತೆರಳಬಹುದಾಗಿದೆ.