ಸೋಮವಾರಪೇಟೆ ಜಲಾಲಿಯ ಮದರಸ ಸಭಾಂಗಣದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು. 
ನ್ಯೂಸ್

ಈದ್ ಮಿಲಾದ್ ಪ್ರಯುಕ್ತ ರಕ್ತದಾನ

ಎಂ.ರವಿ

ಸೋಮವಾರಪೇಟೆ: ಜಲಾಲಿಯ ಮಸೀದಿ, ಈದ್ ಮಿಲಾದ್ ಸಮಿತಿ ಹಾಗೂ ಮಡಿಕೇರಿಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜಲಾಲಿಯ ಮದರಸ ಸಭಾಂಗಣದಲ್ಲಿ ರಕ್ತದಾನ ಶಿಬಿರ ಗುರುವಾರ ನಡೆಯಿತು.

ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಜಮೀರ್ ಆಹಮ್ಮದ್ ಮಾತನಾಡಿ, ರಕ್ತಕ್ಕೆ ಪರ್ಯಾಯವಿಲ್ಲದ ಕಾರಣ ದಾನಿಗಳೇ ರಕ್ತದಾನ ಮಾಡಿ ಇನ್ನೊಂದು ಜೀವವನ್ನು ಉಳಿಸಬೇಕಾಗಿದೆ. ರಕ್ತದಾನ ಪವಿತ್ರವಾದುದು. ರಕ್ತದಾನದಿಂದ ದಾನಿಯೂ ಉತ್ತಮ ಆರೋಗ್ಯವನ್ನು ಹೊಂದಬಹುದು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಜಲಾಲಿಯ ಮಸೀದಿಯ ಅಧ್ಯಕ್ಷ ಕೆ.ಎಂ.ಆದಂ ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ತುರ್ತು ಸಂದರ್ಭಗಳಲ್ಲಿ ಯಾರೇ ದಾನ ಮಾಡಿದರೂ, ಅದನ್ನು ಮತ್ತೊಂದು ಜೀವ ಉಳಿಸಲು ಬಳಸಿಕೊಳ್ಳಲಾಗುತ್ತದೆ. ಅರೋಗ್ಯವಂತರ ರಕ್ತದಾನ ಮಾಡಬೇಕಿದೆ ಎಂದರು.

ಜಲಾಲಿಯ ಮಸೀದಿಯ ಧರ್ಮಗುರು ಅಬ್ದುಲ್ ಹಮೀದ್ ಸಖಾಫಿ ಮಾತನಾಡಿ, ಮಸೀದಿಯಲ್ಲಿ ಕೆಲವು ವರ್ಷಗಳಿಂದ ಧರ್ಮಾತೀತವಾಗಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಇದರಲ್ಲಿ ಎಲ್ಲರೂ, ಪಾಲ್ಗೊಂಡು ರಕ್ತದಾನ ಮಾಡುತ್ತಿರುವುದು ವಿಶೇಷ. ರಕ್ತದಾನದ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಜಲಾಲಿಯ ಮದರಸ ಅಧ್ಯಕ್ಷ ಮುನಿರ್ ಸಅದಿ, ಮಸೀದಿಯ ಉಪಾಧ್ಯಕ್ಷ ಆಶ್ರಫ್, ಪ್ರಧಾನ ಕಾರ್ಯದರ್ಶಿ ಆಸಿಫ್ ಇದ್ದರು.