ನ್ಯೂಸ್

ರಕ್ತದಾನ ಮಾಡುವ ಮೂಲಕ ಜೀವ ಉಳಿಸಿ; ಡಾ. ಬಸವರಾಜ

ರಾಣೆಬೆನ್ನೂರ: ರಕ್ತದಾನ ಒಂದು ಸಮಾಜಮುಖಿ ಕಾರ್ಯವಾಗಿದ್ದು, ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ರೋಗಿಯ ಜೀವ ಉಳಿಸಿದ ಪುಣ್ಯ ನಿಮ್ಮದಾಗಲಿದೆ ಎಂದು ಹಾವೇರಿ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.

ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಯುವ ರೆಡ್​ ಕ್ರಾಸ್​, ಭಗತ್​ ಸಿಂಗ್​ ರೋವರ್ಸ್​ ಘಟಕ, ಜಿಲ್ಲಾ ರಕ್ತ ನಿಧಿ ಕೇಂದ್ರ ಹಾಗೂ ಸ್ಥಳಿಯ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಂತರು ಆರು ತಿಂಗಳಿಗೊಮ್ಮೆ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ರೋಗಿಯ ಜೀವ ಉಳಿಸುವ ಮೂಲಕ ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ರಕ್ತದಾನ ಒಂದು ವರದಾನವಾಗಿದೆ. ವಿದ್ಯಾಥಿರ್ಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಪ್ರೊ. ಎಸ್​.ಪಿ. ಗೌಡರ ಮಾತನಾಡಿ, ರಕ್ತದಾನವು ಎಲ್ಲ ದಾನಗಳಿಗಿಂತ ಶ್ರೇಷ್ಠವಾದದ್ದು, ಜೀವ ಉಳಿಸಿದ ಮಹತ್ಕಾರ್ಯ ನಿಮ್ಮದಾಗಲಿದೆ. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಜಿಲ್ಲಾ ಹಾಗೂ ತಾಲೂಕು ರಕ್ತನಿಧಿ ಕೇಂದ್ರಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದರು.

ಜಿಲ್ಲಾ ತಾಂತ್ರಿಕ ಅಧಿಕಾರಿ ಬಸವರಾಜ ಕಮತದ, ಡಾ. ಹನುಮಂತ, ಉಪನ್ಯಾಸಕರಾದ ಬಸವರಾಜ ಹುಗ್ಗಿ, ನಾಗರಾಜ ಗೋಡಿಹಾಳ., ರವಿ ಎಂ., ರವಿಕುಮಾರ ಎಸ್​.ಯು., ಸತೀಶ ಎಂ., ಮೋಹನ ಬೆಣಿಗೇರಿ, ಹೊನ್ನಪ್ಪ ಹೊನ್ನಪ್ಪನವರ., ಬಿ.ಎಸ್​. ಮಲ್ಲೂರ, ಸಂತೋಷಕುಮಾರ ಕೆ.ಸಿ., ಗಂಗಮ್ಮ ದಾನಮ್ಮನವರ, ರೂಪಾ ಮುದಿಗೌಡರ ಮತ್ತಿತರರು ಉಪಸ್ಥಿತರಿದ್ದರು.