ಬೆಂಗಳೂರು: ಪರಿಶಿಷ್ಟ ಪಂಗಡಗಳಲ್ಲಿನ ಕೆಲವು ಸಮುದಾಯಗಳ ತಕರಾರು ಪುರಸ್ಕರಿಸಿ, ತಳವಾರ ಸಮುದಾಯದವರಿಗೆ ಎಸ್‌ಟಿ ಪ್ರಮಾಣಪತ್ರ ನೀಡುವುದಕ್ಕೆ ತಡೆಯೊಡ್ಡುವುದು ಸಲ್ಲದು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಕ್ಷೇಪಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ತಳವಾರ ಸಮುದಾಯ ಎಸ್‌ಟಿಗೆ ಸೇರುತ್ತದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಣಯವನ್ನು ತೆಗೆದುಕೊಂಡಿದೆ.
ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಿ ಕೇಂದ್ರ ಸರ್ಕಾರ ಅಧಿಕೃತ ಹೊರಡಿಸಿದ ನಂತರ ಹಿಂದುಳಿದ ವರ್ಗಗಳ ಆಯೋಗವು ಪ್ರವರ್ಗ-1ರ ಪಟ್ಟಿಯಿಂದ ತಳವಾರ ಸಮುದಾಯವನ್ನು ತೆಗೆದುಹಾಕಿ, ಎಸ್‌ಟಿಗೆ ಸೇರಿರುವುದನ್ನು ಖಚಿತಪಡಿಸಿದೆ.
ತಳವಾರ ಸಮುದಾಯ ಅಧಿಕೃತವಾಗಿ ಎಸ್‌ಟಿಯಲ್ಲಿದೆ. ಆದರೂ ಕೆಲವರು ತಕರಾರು ತೆಗೆದರು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಪೂರ್ವಾಪರ ಯೋಚಿಸದೆ ಎಸ್‌ಟಿ ಪ್ರಮಾಣಪತ್ರ ನೀಡುವುದನ್ನು ತಡೆಯಲು ಮುಂದಾಗಿರುವುದು ಸರಿಯಲ್ಲ.
ಸಿಎಂ ಸಿದ್ದರಾಮಯ್ಯ ಅವರು ಈ ತಕರಾರನ್ನು ಸಮಾಧಾನ ಚಿತ್ತದಿಂದ ಪರಿಶೀಲಿಸಿ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣಪತ್ರ ನೀಡುವುದನ್ನು ಮುಂದುವರಿಸಬೇಕು. ತಡೆಯೊಡ್ಡಿದರೆ ತಳವಾರ ಸಮುದಾಯದವರಿಗೆ ದೊಡ್ಡ ಅನ್ಯಾಯವಾಗಲಿದೆ ಎಂದು ಎನ್.ರವಿಕುಮಾರ್ ಕಳವಳ ವ್ಯಕ್ತಪಡಿಸಿದರು.