ನವದೆಹಲಿ: ದೇಶಾದ್ಯಂತ ಕಳೆದ ಎರಡು ದಿನಗಳಿಂದ ಹುಸಿ ಬಾಂಬ್ ಕರೆಗಳು ಬಂದ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಬುಧವಾರವೂ ಮತ್ತೆ ಅಂಥದ್ದೇ ಹುಸಿ ಬಾಂಬ್ ಕರೆಗಳು ಬಂದಿವೆ. ಈ ನಡುವೆ ಇಂಥ ಹುಸಿ ಬಾಂಬ್ ಕರೆದಾರರ ‘ಹಾರಾಟ’ ಬಂದ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಹುಸಿ ಕರೆ ಮಾಡುವವರನ್ನು ವಿಮಾನ ಪ್ರಯಾಣ ಮಾಡದಂತೆ ನಿರ್ಬಂಧಿಸುವ ನಿಯಮ ಜಾರಿಗೆ ತರಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ವಿಮಾನಯಾನ ಸಂಸ್ಥೆಗಳಿಗೆ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಯ ಹುಸಿ ಕರೆ ಮಾಡುವವರನ್ನು ವಿಮಾನ ಪ್ರಯಾಣ ನಿರ್ಬಂಧಿತರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯೊಂದನ್ನು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಈ ಜೂನ್ನಲ್ಲೇ ಕೇಂದ್ರ ವಾಯಯಾನ ಸಚಿವಾಲಯಕ್ಕೆ ಸಲ್ಲಿಸಿದ್ದು, ಇದೀಗ ಆ ನಿಟ್ಟಿನಲ್ಲಿ ಮತ್ತಷ್ಟು ಗಂಭೀರವಾಗಿ ಯೋಚನೆ ಮಾಡುತ್ತಿದೆ. ಈ ಸಂಬಂಧ ಸದ್ಯ ಯಾವುದೇ ಕಾನೂನುಗಳು ಇಲ್ಲವಾದರೂ ಇಂಥ ನಿರ್ಬಂಧ ತರಲು ಯತ್ನಿಸುವುದಾಗಿ ವಾಯಯಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಿ ತೊಂದರೆಗೆ ಒಳಗಾಗಿಸುವ ಇಂಥವರ ವಿರುದ್ಧ ಸೂಕ್ತಕ್ರಮಕ್ಕೆ ಆಗ್ರಹಿಸಿ ವಿಮಾನಯಾನ ಸಂಸ್ಥೆಗಳೂ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಈ ಮಧ್ಯೆ ಬುಧವಾರ ಹುಸಿ ಬಾಂಬ್ ಕರೆ ಹಿನ್ನೆಲೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ ಫ್ಲೈಟ್ ಮತ್ತೆ ದೆಹಲಿಗೆ ಮರಳಿದ ಘಟನೆ ನಡೆದಿದೆ. ಸೋಮವಾರದಿಂದ ಇಂಥ ಹತ್ತಕ್ಕೂ ಹೆಚ್ಚು ಹುಸಿ ಬಾಂಬ್ ಕರೆ ಪ್ರಕರಣಗಳು ಸಂಭವಿಸಿವೆ.
ಸಂಸದೀಯ ಸಮಿತಿಯಲ್ಲೂ ಚರ್ಚೆ: ಕಳೆದೆರಡು ದಿನಗಳಲ್ಲಿ ಸುಮಾರು 12 ವಿಮಾನಗಳಿಗೆ ಹುಸಿ ಬಾಂಬ್ ಕರೆ ಬಂದಿರುವ ಹಿನ್ನೆಲೆಯಲ್ಲಿ ಈ ವಿಚಾರ ಬುಧವಾರ ದೆಹಲಿಯಲ್ಲಿ ನಡೆದ ಸಾರಿಗೆ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲೂ ಚರ್ಚೆ ಆಗಿದೆ. ಕೇಂದ್ರ ವಿಮಾನ ಯಾನ ಸಚಿವ ರಾಮ್ೋಹನ್ ನಾಯ್ಡು ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದ ಅಧಿಕಾರಿಗಳು ಭಾಗಿ ಆಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದ್ದು, ಕೆಲವು ಶಂಕಿತರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪ್ರಾಪ್ತನ ಕಿಡಿಗೇಡಿತನ: ಸೋಷಿಯಲ್ ಮೀಡಿಯಾದ ನಕಲಿ ಖಾತೆ ಮೂಲಕ ನಾಲ್ಕು ವಿಮಾನಗಳಿಗೆ ಹುಸಿ ಬಾಂಬ್ ಕರೆ ಮಾಡಿದ ಅಪ್ರಾಪ್ತ ವಯಸ್ಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಛತ್ತೀಸ್ಗಢದ 11ನೇ ತರಗತಿಗೇ ಓದು ನಿಲ್ಲಿಸಿದ್ದವನೊಬ್ಬ ತನ್ನ ಸ್ನೇಹಿತನ ಬಳಿ ಹಣದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ. ಹಣ ಕೊಡದ ತನ್ನ ಸ್ನೇಹಿತನ ಹೆಸರಿನಲ್ಲಿ ಎಕ್ಸ್ ಖಾತೆ ತೆರೆದ ಆತ ಅ.14ರಂದು ಹುಸಿ ಬಾಂಬ್ ಕರೆ ಮಾಡಿದ್ದ.