ನೇಪಾಳ ಸರೋವರ ಬಳಿ 6 ಮಂದಿ ಭಾರತೀಯರು ನಾಪತ್ತೆ 
ನ್ಯೂಸ್

ನೇಪಾಳದಲ್ಲಿ ಚಂಡಮಾರುತಕ್ಕೆ ಹಿಮಪಾತ: ಟ್ರೇಕಿಂಗ್ ಹೋಗಿದ್ದ 6 ಭಾರತೀಯರು ನಾಪತ್ತೆ! | Indian Tourists Missing Nepal

ನೇಪಾಳದ ಶೇ-ಫೋಕ್ಸುಂಡೋ ಟ್ರೇಕಿಂಗ್ ವೇಳೆ 6 ಮಂದಿ ಭಾರತೀಯರು ನಾಪತ್ತೆ

ನುಮ್ಲಾ ಪಾಸ್ ಮತ್ತು ಬಾಗ್‌ಲಾ ಪಾಸ್ ಮಾರ್ಗ ಮಧ್ಯೆ ಹಿಮಪಾತದಲ್ಲಿ ಸಿಲುಕಿರುವ ಶಂಕೆ

ಸ್ಥಳೀಯರ ಮುನ್ನೆಚ್ಚರಿಕೆಯನ್ನೂ ಮೀರಿ ಚಾರಣ ಮುಂದುವರಿಸಿದ್ದ ಪ್ರವಾಸಿಗರು

ಮೊಬೈಲ್ ನೆಟ್‌ವರ್ಕ್ ಇಲ್ಲದೆ ಮಾಹಿತಿ ಪಡೆಯಲು ಸ್ಥಳೀಯ ಆಡಳಿತಕ್ಕೆ ಸವಾಲು

Nepal Snowfall: ನೇಪಾಳದ ಅತ್ಯಂತ ಆಳವಾದ ಸರೋವರ ಎಂದೇ ಹೆಸರಾಗಿರುವ ಶೇ-ಫೋಕ್ಸುಂಡೋಗೆ ಚಾರಣ ಕೈಗೊಂಡಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಭಾರತೀಯ ಪ್ರವಾಸಿಗರು ತೀವ್ರ ಹಿಮಪಾತದ ಕಾರಣದಿಂದ ನಾಪತ್ತೆಯಾಗಿದ್ದಾರೆ.

ಡೋಲ್ಪೋ ಬುದ್ಧ ಗ್ರಾಮೀಣ ಪುರಸಭೆಯ ವಾರ್ಡ್ 4 ಮತ್ತು 8ರಿಂದ ಶೇ-ಫೋಕ್ಸುಂಡೋ ಸರೋವರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಇವರು ಸಂಪರ್ಕ ಕಳೆದುಕೊಂಡಿದ್ದಾರೆ. ಶೇ-ಫೋಕ್ಸುಂಡೋ ಗ್ರಾಮೀಣ ಪುರಸಭೆಯ ನುಮ್ಲಾ ಪಾಸ್ ಮತ್ತು ಬಾಗ್‌ಲಾ ಪಾಸ್ ನಡುವಿನ ಪ್ರದೇಶದಲ್ಲಿ ಪ್ರವಾಸಿಗರು ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಮುನ್ನೆಚ್ಚರಿಕೆ ಮೀರಿ ಟ್ರೇಕಿಂಗ್

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅರ್ನಾಬ್' ಚಂಡಮಾರುತದ ಪ್ರಭಾವದಿಂದಾಗಿ ಹಿಮಾಲಯ ಪ್ರದೇಶದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಹಿಮಪಾತದ ಕಾರಣದಿಂದಾಗಿ ಪರ್ವತ ಮಾರ್ಗಗಳನ್ನು ಹಾದುಹೋಗುವುದು ಕಷ್ಟವೆಂದು ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದರೂ, ಅದನ್ನು ಲೆಕ್ಕಿಸದೆ ಪ್ರವಾಸಿಗರು ಎತ್ತರದ ಪ್ರದೇಶದತ್ತ ತೆರಳಿದ್ದರು. ಹಿಂತಿರುಗುವಾಗ ಇವರು ಹಿಮದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಡೋಲ್ಪಾ ಮುಖ್ಯ ಜಿಲ್ಲಾಧಿಕಾರಿ ಜುನು ಹಮಾಲ್, ಧೋ ಪ್ರದೇಶದಿಂದ ಫೋಕ್ಸುಂಡೋ ಸರೋವರಕ್ಕೆ ಹಿಂತಿರುಗುವಾಗ ಪ್ರವಾಸಿಗರು ಹಿಮದಲ್ಲಿ ಸಿಲುಕಿಕೊಂಡಿದ್ದಾರೆ. ಹವಾಮಾನ ವೈಪರೀತ್ಯದ ಬಗ್ಗೆ ಸ್ಥಳೀಯರು ಎಚ್ಚರಿಸಿದ್ದರೂ ಅವರು ಪ್ರಯಾಣ ಮುಂದುವರಿಸಿದ್ದರು" ಎಂದು ತಿಳಿಸಿದ್ದಾರೆ.

ಸಂಪರ್ಕವಿಲ್ಲದೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ

ವಾರ್ಡ್ 4 ಮತ್ತು 8ರ ನಡುವಿನ ಪರ್ವತ ಮಾರ್ಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದು ಪ್ರವಾಸಿಗರ ಮಾಹಿತಿ ಪಡೆಯಲು ಸವಾಲಾಗಿದೆ ಎಂದು ಶೇ-ಫೋಕ್ಸುಂಡೋ ಗ್ರಾಮೀಣ ಪುರಸಭೆಯ ಅಧ್ಯಕ್ಷ ಧವಾ ಸಮ್ದುಕ್ ಗುರುಂಗ್ ತಿಳಿಸಿದ್ದಾರೆ. ಪ್ರಸ್ತುತ ಅಪ್ಪರ್ ಡೋಲ್ಪಾ ಪ್ರದೇಶದಲ್ಲಿ 149 ನೇಪಾಳಿಗಳು ಸೇರಿದಂತೆ ಒಟ್ಟು 244 ಪ್ರವಾಸಿಗರಿದ್ದು, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಅಪಾಯಕಾರಿ ಸ್ಥಳಗಳಿಗೆ ತೆರಳದೆ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

ಹೆಲಿಕಾಪ್ಟರ್ ಮತ್ತು ಸೇನೆಯ ನೆರವು

ಆರು ಮಂದಿ ಭಾರತೀಯ ಪ್ರವಾಸಿಗರು ನಾಪತ್ತೆಯಾಗಿದ್ದು, ಅವರ ರಕ್ಷಣೆಗಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಮನವಿ ಮಾಡಲಾಗಿದೆ ಎಂದು ಡೋಲ್ಪಾ ಡಿಎಸ್‌ಪಿ ಅನಿಲ್ ರಾಜ್ ಗಿರಿ ಹೇಳಿದ್ದಾರೆ. ದಟ್ಟ ಹಿಮ ಹಾಗೂ ಕೆಟ್ಟ ಹವಾಮಾನದಿಂದಾಗಿ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿದ್ದರೂ, ಪ್ರವಾಸಿಗರನ್ನು ಹುಡುಕಲು ನೇಪಾಳ ಸೇನೆಯ ತಂಡ ರಂಗಕ್ಕಿಳಿದಿದೆ. (ಏಜೆನ್ಸೀಸ್​)