Blinkit: ಮಹಾರಾಷ್ಟ್ರದ ಮುಂಬೈನಲ್ಲಿ ಬ್ಲಿಂಕಿಟ್ ಡೆಲಿವರಿ ಚಾಲಕನೊಬ್ಬ ಪಾರ್ಸೆಲ್ ಕೊಡುವ ನೆಪದಲ್ಲಿ ತನ್ನ ಎದೆಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯೊಬ್ಬರು ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಆರೋಪ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಬ್ಲಿಂಕಿಟ್ ಆ್ಯಪ್ನ ಹಳದಿ ಸಮವಸ್ತ್ರವನ್ನು ಧರಿಸಿರುವ ಚಾಲಕ, ಪಾರ್ಸೆಲ್ ಅನ್ನು ಹಸ್ತಾಂತರಿಸಿ ಪಾವತಿಯನ್ನು ತೆಗೆದುಕೊಳ್ಳುತ್ತಿರುವುದನ್ನು ವೀಡಿಯೊದಲ್ಲಿ ದಾಖಲಾಗಿದೆ. ಈ ವೇಳೆ ಅವನು ಚಿಲ್ಲರೆ ಹಣವನ್ನು ಹಿಂದಿರುಗಿಸುತ್ತಿದ್ದಂತೆ, ಅವನು ಮಹಿಳೆಯ ಎದೆಯನ್ನು ಮುಟ್ಟಿದಂತೆ ವಿಡಿಯೋದಲ್ಲಿ ಕಾಣುತ್ತದೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಹಿಳೆ, ಇಂದು ಬ್ಲಿಂಕಿಟ್ ನಿಂದ ಆರ್ಡರ್ ಪಡೆಯುವಾಗ ನನಗೆ ಹೀಗೊಂದು ವಿಚಿತ್ರ ಅನುಭವ ಆಯಿತು. ಡೆಲಿವರಿ ಮಾಡಲು ಬಂದಿದ್ದ ವ್ಯಕ್ತಿ ನನ್ನ ವಿಳಾಸ ಕೇಳಿದ ನಂತರ ಅನುಚಿತವಾಗಿ ನನ್ನನ್ನು ಮುಟ್ಟಿದ. ಇದು ಸ್ವೀಕಾರಾರ್ಹವಲ್ಲ. ಭಾರತದಲ್ಲಿ ಮಹಿಳೆಯರ ಸುರಕ್ಷತೆ ಒಂದು ತಮಾಷೆಯೇ?, @letsblinkit ದಯವಿಟ್ಟು ಕಠಿಣ ಕ್ರಮ ಕೈಗೊಳ್ಳಿ ಎಂದು ವಿಡಿಯೋ ಪೋಸ್ಟ್ ಮಾಡಿ ಬರೆದಿದ್ದಾರೆ.
ಡೆಲಿವರಿ ಚಾಲಕನನ್ನು ನಿಷೇಧಿಸಿದ ಬ್ಲಿಂಕಿಟ್
ವಿಡಿಯೋ ಪರಿಶೀಲಿಸಿದ ನಂತರ ಆ ಡೆಲಿವರಿ ಚಾಲಕನನ್ನು ತನ್ನ ಪ್ಲಾಟ್ಫಾರಂನಿಂದ ತೆಗೆದು ಹಾಕಿರುವ ಬ್ಲಿಂಕಿಟ್, ನಮಸ್ಕಾರ, ಫೋನ್ ಮೂಲಕ ನಿಮ್ಮ ಸಮಯಕ್ಕೆ ನಾವು ಧನ್ಯವಾದಗಳು. ಘಟನೆಗೆ ನಾವು ನಿಜವಾಗಿಯೂ ವಿಷಾದಿಸುತ್ತೇವೆ. ಇದು ಎಷ್ಟು ಅಸಮಾಧಾನಕರವಾಗಿದೆ ಎಂದು ಅರ್ಥಮಾಡಿಕೊಂಡಿದ್ದೇವೆ. ನೀವು ತಿಳಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಯಾವುದೇ ಹೆಚ್ಚಿನ ಪ್ರಶ್ನೆಗಳು ಅಥವಾ ಸಹಾಯಕ್ಕಾಗಿ ನಮಗೆ DM ಮಾಡಲು ಹಿಂಜರಿಯಬೇಡಿ ಎಂದು ಹೇಳಿದೆ.
ಮುಂಬೈ ಪೊಲೀಸರು ಸಹ ಮಹಿಳೆಯ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು, ನಾವು ನಿಮ್ಮ ಟ್ವೀಟ್ ಗಮನಿಸಿದ್ದೇವೆ, ದಯವಿಟ್ಟು ನಿಮ್ಮ ಸಂಪರ್ಕ ವಿವರಗಳನ್ನು ನೇರವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ.
ಇನ್ನು ಸಮಾಜಿಕ ಜಾಲತಾಣದಲ್ಲಿ ಮಹಿಳೆ ಆರೋಪಕ್ಕೆ ಸಂಬಂಧಪಟ್ಟಂತೆ ಪರ-ವಿರೋಧ ಚರ್ಚೆ ನಡೆದಿದೆ. ಹಲವರು ವಿಡಿಯೋದಲ್ಲಿ ಸ್ಪಷ್ಟವಾಗಿದೆ ಎಂದು ಮಹಿಳೆಯ ಆರೋಪವನ್ನು ಬೆಂಬಲಿಸಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನು ಕೆಲವರು ವಿಡಿಯೋದಲ್ಲಿ ಅಸ್ಪಷ್ಟವಾಗಿದೆ, ಚಾಲಕನ ಸ್ಪರ್ಶ ಆಕಸ್ಮಿಕವಾಗಿರಬಹುದು. ನೀವು ಪ್ರಚಾರ ಪಡೆಯಲು ಈ ರೀತಿ ಮಾಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)