ನಮ್ಮ ದೈನಂದಿನ ಬದುಕು ಮತ್ತು ನಂಬಿಕೆ ನಿಷ್ಠೆಗಳಲ್ಲಿ ನಿರ್ಮಲ ಚಿತ್ತ ಇರಬೇಕಾದ್ದು ಬಹು ಮುಖ್ಯ. ಅದು ದೇವರನ್ನು ದರ್ಶಿಸಲು ನಮಗೆ ನೆರವಾಗುತ್ತದೆ ಎಂಬುದು ಬಹು ಅನನ್ಯ. ಅರುಣೋದಯದ ಬಳಿಕ ಸೂರ್ಯೋದಯವಾಗುವಂತೆ, ಮನಸ್ಸಿನಲ್ಲಿ ನಿರ್ಮಲತೆ ಮೂಡಿದ ನಂತರವೇ ಬದುಕಿನಲ್ಲಿ ಬೆಳಕನ್ನು ಕಾಣುವುದು. ವಿಕಾರಗಳಿಲ್ಲದ ನಿರ್ಮಲಾಕಾರದ ತಿಳಿ ಮನಸ್ಸು ನಮಗೆ ನೀಡುವ ಸಂಭ್ರಮ ಅಷ್ಟಿಷ್ಟಲ್ಲ. ಯೇಸುವಿನ ಕಾಲದಲ್ಲಿ, ದೇವಾಲಯದ ಹುಂಡಿಯೊಳಗೆ ಶ್ರೀಮಂತರು, ಎಲ್ಲರೂ ನೋಡಲೆಂದೇ ರಾಶಿ ರಾಶಿ ಕಾಣಿಕೆಗಳನ್ನು ನೀಡುವಾಗ, ಒಬ್ಬ ಬಡ ವಿಧವೆ ಯಾರಿಗೂ ಕಾಣಿಸದಂತೆ ತನ್ನಲ್ಲಿದ್ದ ಹಳೆ ದುಗ್ಗಾಣಿಯನ್ನು ದೇವರಿಗೆ ಅರ್ಪಿಸಿದ್ದು ಸರ್ವಶ್ರೇಷ್ಠವಾದ ದಾನ. ನಿರ್ಮಲ ಚಿತ್ತದ ಶಕ್ತಿಗೆ ಕಾಲ, ದೇಶಗಳ ಪರಿವೆ ಇರುವುದಿಲ್ಲ. ಇಂತಹ ಮನಸ್ಸುಗಳು ಮತ್ತು ಅಂತಹ ಮನಸ್ಸುಳ್ಳ ಬದುಕುಗಳಿಗೆ ಎಂತಹ ಕಾಲವೂ ಸಮನಾದುದೇ. ಅಂತಹ ನಿರ್ಮಲ ಚಿತ್ತದ ಕಾಯಕಗಳು ಎಲ್ಲೆಲ್ಲೂ ಪ್ರಶ್ನಾತೀತವಾಗಿಯೇ ಇರುತ್ತವೆ. ಅಂಥವರೇ ದೇವರನ್ನು ಕಾಣುವ ಸುಯೋಗ ಪಡೆಯುತ್ತಾರೆ.