ನ್ಯೂಸ್

ಕರುಣಾಪೂರಿತರು ಭಾಗ್ಯವಂತರು

ಸುದೀಪ್​ ವಿ.ಎನ್​

ತನ್ನ ಪರ್ವತ ಪ್ರಸಂಗ ಪ್ರಸ್ತುತಪಡಿಸುವ ಸಂದರ್ಭದಲ್ಲಿ ಯೇಸು, ಮೇಲಿನ ವಾಕ್ಯವನ್ನೂ ತನ್ನ ಬೋಧನೆಯಲ್ಲಿ ಸೇರಿಸಿದ್ದಾನೆ. ದಯೆಯೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನ ಮಾತು ಅನನ್ಯವಾದುದಾಗಿದೆ. ಸ್ವತಃ ಯೇಸು ಕಲಿಸಿದ ಪ್ರಾರ್ಥನೆ ಇಂತಿದೆ: ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವಂತೆ ನಮ್ಮ ತಪ್ಪುಗಳನ್ನು ಕ್ಷಮಿಸು ಎಂಬುದರ ತಿರುಳು ದಯೆಯಾಗಿದೆ. ಕಷ್ಟ ಪಡುವವರಿಗೆ ಕೇವಲ ಸಾಂತ್ವನ ಹೇಳುವುದರ ಜೊತೆಗೆ ಅಂತಹ ನೊಂದ ಜೀವಿಗಳ ಬದುಕಿನೊಳಗೆ ಪ್ರವೇಶಿಸಿ ಅಂತಹವರ ಕಣ್ಣಿ್ಲನಿಂದಲೇ ಅವರ ಬೇಗುದಿಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ಇನ್ನೊಬರ ನೋವನ್ನು ತಾನೇ ಅನುಭವಿಸುವುದು ಕರುಣೆಯ ನಿಜ ಸ್ವರೂಪ.

ನೊಂದವರ ನೋವಿನಿಂದ ಹೊರಗಿದ್ದು ದೂರದಿಂದ ಸಹಾಯ ಮಾಡದೆ, ಅವರ ಬದುಕಿನೊಳಗೇ ಪ್ರವೇಶಿಸಿ ಅವರ ಕಣ್ಣೀರಿನಲ್ಲಿ ತಾವೂ ಸೇರಿಕೊಳ್ಳುವ ಪ್ರಕ್ರಿಯೆಯನ್ನು ಕ್ರಿಸ್ತ ತನ್ನ ಮಾತಿನಲ್ಲಿ ತೋರ್ಪಡಿಸುತ್ತಾನೆ. ಯೇಸು ದುಃಖ-ದುಮ್ಮಾನ ಅನುಭವಿಸುವವರ ಬದುಕಿಂದ ದೂರ ನಿಂತು ಕರುಣೆ ಅಥವ ಪ್ರೀತಿಯನ್ನು ತೋರಿಸಲಿಲ್ಲ. ಬದಲಿಗೆ, ಅವರ ಬದುಕಿನ ತಳಮಳಗಳೊಂದಿಗೆ ತಾನೂ ಹೆಜ್ಜೆ ಹಾಕುತ್ತ ಅವರೊಡನೆ ಒಂದಾಗಿದ್ದುದು ಅಸಾಮಾನ್ಯ ಕ್ರಿಯೆ. ಇದಕ್ಕಾಗಿಯೇ ಕ್ರಿಸ್ತ ಕರುಣಾಪೂರಿತರು ಭಾಗ್ಯವಂತರು ಎಂದಿರುವುದು. ಏಕೆಂದರೆ, ಅವರು ಅಂತಹ ಇತರರ ಬಗ್ಗೆ ಸದಾ ಮೃದು ಧೋರಣೆ ತಳೆದು, ಅವರ ಭಾವನೆಗಳಿಗೆ ಸ್ಪಂದಿಸುತ್ತ ಉತ್ತಮ ಗುಣಗಳನ್ನು ತಾವೂ ಅನುಕರಿಸುವಂತಹ ಮೇಲ್ಪಂಕ್ತಿಗೆ ಸಾಧನವಾಗುತ್ತಾರೆ.

ಕರುಣೆ, ಸಹಾನುಭೂತಿ, ದಯೆ ಇವೆಲ್ಲವನ್ನು ತನ್ನಲ್ಲಿ ಪ್ರಕಟಿಸುವವನು ಇತರರ ಬಗ್ಗೆಯೂ ಕರುಣೆ ತಳೆದವನಾಗಿದ್ದು, ಇತರರ ಕಷ್ಟ- ಸಂಕಷ್ಟಗಳ ಬಗ್ಗೆ ಮನ ಮಿಡಿಯುತ್ತ ಅವನ್ನು ಹಗುರವಾಗಿಸಲು ಯತ್ನಿಸುತ್ತಾನೆ. ತನ್ನ ಅಕ್ಕ-ಪಕ್ಕ ವಾಸಿಸುವ ಸಹ-ಮಾನವ ಜೀವಿಗಳ ದುಃಖ-ದುರಿತಗಳಿಗೆ ಸ್ಪಂದಿಸುತ್ತ ಅವುಗಳಿಗೆ ಕರುಣೆಯಿಂದಲೇ ಪರಿ ಹಾರ ಒದಗಿಸಲು ಯತ್ನಿಸುತ್ತಾನೆ. ಇಂತಹವರನ್ನೆ ಕ್ರಿಸ್ತ, ಇತರರ ಕರುಣೆ ಸಂಪಾದಿಸುತ್ತ ಸ್ವರ್ಗ ಲೋಕಕ್ಕೆ ಬಾಧ್ಯಸ್ತರಾಗುವವರು ಎಂದಿದ್ದಾನೆ.