ನವದೆಹಲಿ: ಪಾಕಿಸ್ತಾನದ ಆಂತರಿಕ ವೈಫಲ್ಯಗಳಿಗೆ ನೆರೆಯ ರಾಷ್ಟ್ರಗಳನ್ನು ದೂಷಿಸುವುದು ಪಾಕ್ನ ಹಳೆಯ ಪದ್ಧತಿ ಎಂದು ಗುರುವಾರ (ಅಕ್ಟೋಬರ್,16) ಭಾರತ ಟೀಕಿಸಿದೆ. ಅಲ್ಲದೆ, ಇಂಡಿಯಾದ ಪರವಾಗಿ ಅಫ್ಘಾನ್ ತಾಲಿಬಾನ್ ಪ್ರಾಕ್ಸಿ ಯುದ್ಧ (Proxy War) ನಡೆಸುತ್ತಿದೆ ಎಂಬ ಪಾಕಿಸ್ತಾನಿ ರಕ್ಷಣಾ ಸಚಿವರ ಆರೋಪವನ್ನು ತಿರಸ್ಕರಿಸಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಬುಧವಾರ ದುರ್ಬಲವಾದ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲದೆ, ಹಲವಾರು ದಿನಗಳ ಭಾರೀ ಗಡಿ ಸಂಘರ್ಷ ಮತ್ತು ಕಾಬೂಲ್ ಮತ್ತು ಕಂದಹಾರ್‌ನಲ್ಲಿ ಪಾಕ್ ನಡೆಸಿದ ವಾಯುದಾಳಿಗಳು ಎರಡೂ ಕಡೆಗಳಲ್ಲಿ 15ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂಬ ವರದಿಗಳ ನಂತರ ಈ ಘಟನೆ ನಡೆದಿದೆ.
ಇದನ್ನೂ ಓದಿ: Russian Oil | ಟ್ರಂಪ್ ರಷ್ಯಾ ತೈಲ ಹೇಳಿಕೆಗೆ ಭಾರತ ಫಸ್ಟ್ ರಿಯಾಕ್ಷನ್: ವಿದೇಶಾಂಗ ಸಚಿವಾಲಯ ಹೇಳಿದ್ದೇನು..?
ಮುಂದುವರೆದು ಮಾತನಾಡಿದ ಜೈಸ್ವಾಲ್, ಭಾರತವು ಅಫ್ಘಾನಿಸ್ತಾನವನ್ನು ದೃಢವಾಗಿ ಬೆಂಬಲಿಸುತ್ತದೆ. ಅಫ್ಘಾನ್ ತನ್ನದೇ ಆದ ಪ್ರದೇಶಗಳ ಮೇಲೆ ಸಾರ್ವಭೌಮತ್ವವನ್ನು ಚಲಾಯಿಸುವ ಹಕ್ಕನ್ನು ಹೊಂದಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಗಳನ್ನು ಯೋಜಿಸುತ್ತದೆ. ಅಲ್ಲದೆ, ನೆರೆಹೊರೆಯವರ ಮೇಲೆ ದೂಷಿಸುವುದು ಪಾಕಿಸ್ತಾನದ ಹಳೆಯ ಅಭ್ಯಾಸವಾಗಿದೆ ಎಂದು ಜೈಸ್ವಾಲ್ ಕಿಡಿಕಾರಿದ್ದಾರೆ.
ಅಫ್ಘಾನಿಸ್ತಾನ ತನ್ನದೇ ಆದ ಪ್ರದೇಶಗಳ ಮೇಲೆ ಸಾರ್ವಭೌಮತ್ವವನ್ನು ಚಲಾಯಿಸುವುದರಿಂದ ಪಾಕ್ ಕೋಪಗೊಂಡಿದೆ. ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ತಾಲಿಬಾನ್ ಜತೆಗಿನ ಸಂಬಂಧವನ್ನು ಪುನರ್‌ಸ್ಥಾಪಿಸಿಕೊಳ್ಳುತ್ತಿರುವ ಭಾರತ ದೃಢವಾದ ಬೆಂಬಲ ನೀಡಿದೆ. ಅದರೆ, ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ನವದೆಹಲಿಗೆ ತಮ್ಮ ಚೊಚ್ಚಲ ಭೇಟಿ ನೀಡಿದಾಗ, ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯುವುದಾಗಿ ಭಾರತ ಘೋಷಿಸಿದೆ.
ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವಿನ 48 ಗಂಟೆಗಳ ಕದನ ವಿರಾಮದ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅನುಮಾನ ವ್ಯಕ್ತಪಡಿಸುತ್ತಾ, ತಾಲಿಬಾನ್ ಭಾರತದ ಪರವಾಗಿ ಪ್ರಾಕ್ಸಿ ಯುದ್ಧ ನಡೆಸುತ್ತಿದೆ ಎಂದು ಹೇಳಿಕೊಂಡ ಕೆಲವೇ ಗಂಟೆಗಳ ನಂತರ ಭಾರತದ ಪ್ರತಿಕ್ರಿಯೆ ಬಂದಿದೆ.
ಕದನ ವಿರಾಮ ಮುಂದುವರಿಯುತ್ತದೆಯೇ ಎಂಬ ಬಗ್ಗೆ ನನಗೆ ಸಂದೇಹವಿದೆ. ಏಕೆಂದರೆ ಅಫ್ಘಾನ್ ತಾಲಿಬಾನ್‌ನ ನಿರ್ಧಾರಗಳನ್ನು ಭಾರತ ನಿರ್ಧಾರಿಸುತ್ತಿದೆ. ಅಲ್ಲದೆ, ಕಾಬೂಲ್ ದೆಹಲಿಗಾಗಿ ಪ್ರಾಕ್ಸಿ ಯುದ್ಧವನ್ನು ನಡೆಸುತ್ತಿದೆ ಎಂದು ಆಸಿಫ್ ಜಿಯೋಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಪಾಕಿಸ್ತಾನದಲ್ಲಿ ಶಾಲೆಗಳು ಸೇರಿದಂತೆ ಹಲವಾರು ದಾಳಿಗಳನ್ನು ನಡೆಸಿರುವ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿಗಳಿಗೆ ತಾಲಿಬಾನ್ ಆಶ್ರಯ ನೀಡುತ್ತಿದೆ ಎಂಬ ಪಾಕ್ನ ಹೇಳಿಕೆಯೇ ಸಂಘರ್ಷದ ಕೇಂದ್ರಬಿಂದುವಾಗಿದೆ. (ಏಜೆನ್ಸೀಸ್)