ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಗೆಳತಿಗೆ ಬ್ಲ್ಯಾಕ್‌ಮೇಲ್ ಮಾಡಿ ಬರೋಬರಿ 2.57 ಕೋಟಿ ರೂ.ಸುಲಿಗೆ ಮಾಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೋಹನ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿ ಚಾಮರಾಜಪೇಟೆಯ 19 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ 2019ರಿಂದ 2.57 ಕೋಟಿ ರೂ.ಸುಲಿಗೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ಸಂತ್ರಸ್ತೆ ಓದುತ್ತಿದ್ದ ವೇಳೆ ಆರೋಪಿಯ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅಲ್ಲದೆ, ಸಂತ್ರಸ್ತೆಯನ್ನು ಪುಸಲಾಯಿಸಿ ಪ್ರವಾಸಿ ತಾಣಗಳಿಗೆ ಕರೆದೊಯ್ದ ಆರೋಪಿ, ಮದುವೆಯಾಗುವುದಾಗಿ ನಂಬಿಸಿ ಆಕೆ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಈ ವೇಳೆ ಯುವತಿಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 2.57 ಕೋಟಿ ರೂ. ಸುಲಿಗೆ ಮಾಡಿದ್ದಾನೆ. ಅಲ್ಲದೆ, ಆಕೆಯಿಂದ ಚಿನ್ನಾಭರಣ, ದುಬಾರಿ ಮೌಲ್ಯದ ವಾಚ್, ಬೈಕ್‌ಗಳನ್ನು ಪಡೆದುಕೊಂಡಿದ್ದಾನೆ. ಆದರೆ, ಆರೋಪಿಯ ಕಿರುಕುಳ ಹೆಚ್ಚಾದರಿಂದ ಬೇಸತ್ತ ಯುವತಿ, ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.