ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಪರಿಚಯವಾಗಿದ್ದ ಮಹಿಳೆಯ ಸ್ನೇಹ ಬೆಳೆಸಿ ಆಕೆಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು, ಲೈಂಗಿಕವಾಗಿ ಸಹಕರಿಸುವಂತೆ ಬ್ಲಾಕ್ವೆುೕಲ್ ಮಾಡುತ್ತಿದ್ದ ಸಿನಿಮಾ ವಿತರಕನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ಜೆ.ಪಿ.ಪಾರ್ಕ್ ನಿವಾಸಿ ರೂಪೇಶ್ (39) ಬಂಧಿತ. ದೂರುದಾರ ಮಹಿಳೆಗೆ ಮೆಲ್ಬೋರ್ನ್ನಲ್ಲಿ ಆರೋಪಿಯೊಂದಿಗೆ ಸ್ನೇಹವಾಗಿತ್ತು. ಆಕೆಯನ್ನು ಖಾಸಗಿ ಫೋಟೋ ಮತ್ತು ವಿಡಿಯೋಗಳಿಂದ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ. ಅಲ್ಲದೆ, ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಏನಿದು ಪ್ರಕರಣ?: ಸಂತ್ರಸ್ತೆ ಮಹಿಳೆ ಬೆಂಗಳೂರಿನವರಾಗಿದ್ದು, ಹಲವು ವರ್ಷಗಳಿಂದ ಪತಿ ಹಾಗೂ ಮಕ್ಕಳ ಜತೆ ಮೆಲ್ಬರ್ನ್ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರೂಪೇಶ್ ಕೂಡ 8 ವರ್ಷದಿಂದ ಮೆಲ್ಬರ್ನ್ನಲ್ಲಿ ವಾಸಿಸುತ್ತಿದ್ದು, ಈವೆಂಟ್ ಮ್ಯಾನೇಜ್ವೆುಂಟ್ ಹಾಗೂ ಕನ್ನಡ ಮತ್ತು ದಕ್ಷಿಣ ಭಾರತದ ಸಿನಿಮಾಗಳ ವಿತರಕನಾಗಿದ್ದ. ಕನ್ನಡ ಸಿನಿಮಾ ಪ್ರಚಾರಗಳಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ. ಅಲ್ಲಿಗೆ ಭೇಟಿ ಕೊಡುತ್ತಿದ್ದ ಸಿನಿಮಾ ನಟರ ಜತೆಗಿದ್ದು ಅವರಿಗೆ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡುತ್ತಿದ್ದ.
ಹುಕ್ಕಾ ಸೇದಿಸಿ ಪ್ರಜ್ಞೆ ತಪ್ಪಿಸಿದ್ದ!: ಕಳೆದ ವರ್ಷ ಸಂತ್ರಸ್ತ ಮಹಿಳೆಗೆ ರೂಪೇಶ್ನ ಪರಿಚಯವಾಗಿತ್ತು. ತಾನು ಕನ್ನಡಿಗ ಎಂದು ಹೇಳಿಕೊಂಡಿದ್ದರಿಂದ ಇಬ್ಬರ ನಡುವೆ ಸ್ನೇಹವಾಗಿದೆ. ಅದನ್ನೇ ಬಳಸಿಕೊಂಡಿದ್ದ ರೂಪೇಶ್, ಆಕೆಯಿಂದ ಹಲವು ಬಾರಿ ಹಣದ ಸಹಾಯ ಪಡೆದು ಹಿಂದಿರುಗಿಸಿ ನಂಬಿಕೆ ಗಿಟ್ಟಿಸಿಕೊಂಡಿದ್ದ. ಕೆಲ ತಿಂಗಳ ಹಿಂದೆ ಸಂತ್ರಸ್ತೆ ರೆಸ್ಟೋರೆಂಟ್ಗೆ ಹೋಗಿದ್ದು ರೂಪೇಶ್ ಭೇಟಿಯಾಗಿದ್ದ. ಈ ವೇಳೆ ಆಕೆಗೆ ಅಮಲು ಬರುವ ತಂಪುಪಾನೀಯ ಕುಡಿಸಿ, ಬಲವಂತ ಮಾಡಿ ಹುಕ್ಕಾ ಸೇದಿಸಿದ್ದ. ಅದರಿಂದ ಆಕೆಯ ಪ್ರಜ್ಞೆ ತಪ್ಪಿತ್ತು. ಅದೇ ಸಂದರ್ಭದಲ್ಲಿ, ಆಕೆಯ ಜತೆ ಮೋಜು ಮಾಡಿರುವಂತೆ ಬಿಂಬಿಸುವ ಫೋಟೋ ಹಾಗೂ ವಿಡಿಯೋಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದ.
ಹಣ ಕೊಡದಿದ್ದಾಗ ಬ್ಲಾ್ಯಕ್ವೆುೕಲ್: ಕೆಲ ದಿನಗಳ ನಂತರ ಸಂತ್ರಸ್ತೆಗೆ ಕರೆ ಮಾಡಿದ್ದ ರೂಪೇಶ್ ನಾವಿಬ್ಬರು ಒಟ್ಟಿಗೆ ಇರುವ ಖಾಸಗಿ ಫೋಟೋ ಹಾಗೂ ವಿಡಿಯೋಗಳು ನನ್ನ ಬಳಿ ಇವೆ. ಅವನ್ನು ಪತಿ ಹಾಗೂ ಕುಟುಂಬಸ್ಥರಿಗೆ ಕಳುಹಿಸುತ್ತೇನೆ ಎಂದು ಬೆದರಿಸಿ 6 ಲಕ್ಷ ರೂ. ವಸೂಲಿ ಮಾಡಿದ್ದ. ಅಷ್ಟಕ್ಕೆ ಸುಮ್ಮನಾಗದೆ ಹಣಕ್ಕಾಗಿ ನಿರಂತರ ಪೀಡಿಸುತ್ತಿದ್ದ. ಹಣ ಕೊಡಲು ನಿರಾಕರಿಸಿದಾಗ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದ. ಹಣ ಕೊಡಲು ಆಗದಿದ್ದರೆ ಲೈಂಗಿಕವಾಗಿ ಸಹಕರಿಸುವಂತೆ ಬ್ಲಾ್ಯಕ್ವೆುೕಲ್ ಮಾಡತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಶಕ್ಕೆ ಪಡೆಯಲು ನಿರ್ಧಾರ
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ರಂಗಿತರಂಗ ಸೇರಿ ಹಲವು ಕನ್ನಡ ಸಿನಿಮಾಗಳನ್ನು ಆಸ್ಟ್ರೇಲಿಯಾದಲ್ಲಿ ಪ್ರದರ್ಶನ ಮಾಡಿಸಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ರೂಪೇಶ್ ಹೇಳಿಕೆ ನೀಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.
ಮೆಲ್ಬರ್ನ್ನಿಂದ ಬಂದು ಕಿರುಕುಳ ಕೊಡುತ್ತಿದ್ದ..
ರೂಪೇಶ್ ಕಿರುಕುಳದಿಂದ ಬೇಸತ್ತ ಸಂತ್ರಸ್ತೆ, ನಡೆದ ವಿಚಾರವನ್ನು ಪತಿಯ ಮುಂದೆ ಹೇಳಿಕೊಂಡಿದ್ದರು. ಬಳಿಕ ಫೆ. 1ರಂದು ಕುಟುಂಬದ ಜತೆ ಮೆಲ್ಬರ್ನ್ನಿಂದ ನಗರಕ್ಕೆ ಬಂದು ಸಂಬಂಧಿಕರ ಮನೆಯಲ್ಲಿದ್ದರು. ಈ ವಿಚಾರವನ್ನು ತಿಳಿದ ರೂಪೇಶ್, ಫೆ.23ರಂದು ಮೆಲ್ಬರ್ನ್ನಿಂದ ಬೆಂಗಳೂರಿಗೆ ಬಂದಿದ್ದ. ಸಂತ್ರಸ್ತೆಗೆ ಕರೆ ಮಾಡಿ ತಾನಿರುವ ಸ್ಥಳಕ್ಕೆ ಬರುವಂತೆ ಸೂಚಿಸಿದ್ದ. ಅಲ್ಲಿಗೆ ಬಾರದಿದ್ದಾಗ ಮನೆ ಬಳಿ ಹೋಗಿ ಜಗಳ ಮಾಡಿದ್ದಾನೆ. ಈ ಕುರಿತು ಸಂತ್ರಸ್ತೆ ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಆರೋಪಿ ಬಳಸುತ್ತಿದ್ದ ಫೋನ್ ನಂಬರ್ ಲೊಕೇಷನ್ ಸುಳಿವಿನ ಮೇರೆಗೆ ಯಶವಂತಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.