ನ್ಯೂಸ್

ಗ್ಯಾರಂಟಿ ನಿಲ್ಲಿಸುವುದಾಗಿ ಸರ್ಕಾರದಿಂದ ಜನರ ಬ್ಲಾಕ್ ಮೇಲ್

ಬೆಂಗಳೂರು: ಗ್ಯಾರಂಟಿ ನಿಲ್ಲಿಸುವುದಾಗಿ ಹೇಳುವ ಮೂಲಕ ಸರ್ಕಾರ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಜೆಡಿಎಸ್ ಕಚೇರಿಯಲ್ಲಿ ಹಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ, ಪರಿಷ್ಕರಣೆ ನೆಪದಲ್ಲಿ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಗ್ಯಾರಂಟಿ ಯೋಜನೆ ನಿಲ್ಲಿಸುವುದಾಗಿ ಹೇಳಿದ್ದರು. ಈಗ ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ತಂತ್ರ ನಡೆಯುತ್ತಿದೆ. ಆ ಮೂಲಕ ಜನರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದರು.

ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳಬೇಕು. ಇದು ಅದರ ಕರ್ತವ್ಯ ಕೂಡ. ಇಲ್ಲದ ನೆಪ ಹುಡುಕಿ ಗ್ಯಾರಂಟಿಗೆ ಕತ್ತರಿ ಹಾಕಬಾರದು ಎಂದು ಹೇಳಿದರು.

ಜನರೇನು ಉಚಿತ ಗ್ಯಾರಂಟಿ ಕೇಳಿದ್ದರೆ?

ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಕಾ ಪಾಟೀಲ್‌ಗೂ ಫ್ರೀ, ಮಹದೇವಪ್ಪಗೂ ಫ್ರೀ ಅಂದಿದ್ದರು. ಅವರಾಗಲೀ, ಜನರಾಗಲೀ ಉಚಿತ ಗ್ಯಾರಂಟಿ ನೀಡುವಂತೆ ಕೇಳಿರಲಿಲ್ಲ. ಆದರೂ 5 ಗ್ಯಾರಂಟಿಯ ಭರವಸೆ ಕೊಟ್ಟಿದ್ದರು. ಗ್ಯಾರಂಟಿ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಎಂದು ಟೀಕಿಸಿದರು.

ದುಬಾರಿ ಸರ್ಕಾರ, ಜನ ಹೈರಾಣ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸ್ವತ್ತುಗಳ ಮಾರ್ಗಸೂಚಿ ದರ ಶೇ.30ರಷ್ಟು ಹೆಚ್ಚಳ ಮಾಡಿದೆ. ಡೀಸೆಲ್, ಪೆಟ್ರೊಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಪ್ರೊತ್ಸಾಹ ಧನ ಸರಿಯಾಗಿ ನೀಡುತ್ತಿಲ್ಲ ಎಂದು ಹರಿಹಾಯ್ದರು.

ಹಗರಣಗಳ ವಿರುದ್ಧ ನಿರಂತರ ಹೋರಾಟ

ವಾಲ್ಮೀಕಿ ಅಭಿವೃದ್ಧಿ ನಿಗಮದ ಆರ್ಥಿಕ ಅಕ್ರಮ ಹಾಗೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ಮಾಡಿ ಜನರ ಗಮನ ಸೆಳೆದಿದ್ದೇವೆ. ಸರ್ಕಾರದ ಜನವಿರೋಧಿ ಧೋರಣೆ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಗುಡುಗಿದರು.

ರೈತರಿಗೆ ನಷ್ಟ ಮಾಡದಂತೆ ಕ್ರಮ ಕೈಗೊಳ್ಳಿ

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಮುರಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯಕ್ಕೆ ಅಷ್ಟೇ ಅಲ್ಲ, ಆಂದ್ರಪ್ರದೇಶ, ತೆಲಂಗಾಣಕ್ಕೂ ನೀರು ಬೇಕು. ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು ಬೇಕು. ಅಲ್ಲದೆ ರೈತರಿಗೆ ನೀರು ಬೇಕಾಗುತ್ತದೆ. ಈಗಾಗಲೇ 27 ಟಿಎಂಸಿ ನೀರು ಜಲಾಶಯದಿಂದ ಹೊರಗೆ ಹೋಗಿದೆ. 63 ಟಿಎಂಸಿಯಷ್ಟು ನೀರು ಖಾಲಿಯಾದ ನಂತರ ಗೇಟ್ ಅಳವಡಿಸುವುದಾಗಿ ತಜ್ಞರು ಹೇಳಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ನಷ್ಟವಾಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ನಗರ ಘಟಕಾಧ್ಯಕ್ಷ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಕೆ.ಎ.ತಿಪ್ಪೆಸ್ವಾಮಿ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.