ಚಂಡೀಗಢ : ಪಂಜಾಬಿನಲ್ಲಿ 32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಖಾಯಿಲೆ ಕಂಡುಬಂದಿದೆ. ಈ ಜನರಿಗೆ ಅನ್ಯ ರೋಗಗಳ ಚಿಕಿತ್ಸೆಗಾಗಿ ಸ್ಟಿರಾಯ್ಡ್ಗಳನ್ನು ನೀಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ರಾಜ್ಯದಲ್ಲಿ 158 ಮ್ಯೂಕರ್ಮೈಕೋಸಿಸ್(ಬ್ಲ್ಯಾಕ್ ಫಂಗಸ್) ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 32 ರೋಗಿಗಳಿಗೆ ಕರೊನಾ ಸೋಂಕಿನ ಇತಿಹಾಸವಿಲ್ಲ. ಇದು ಕರೊನಾದಿಂದಾಗಿ ಈ ಖಾಯಿಲೆ ಉಂಟಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದು, ಅತಿಯಾದ ಸ್ಟಿರಾಯ್ಡ್ ಬಳಕೆಯೇ ಮುಖ್ಯ ಕಾರಣ ಎಂಬುದಕ್ಕೆ ಪುಷ್ಟಿ ನೀಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕಿತರ ಕುಟುಂಬಸ್ಥರಿಗೆ ಸ್ಥಳೀಯರ ಕಿರುಕುಳ.. ಬೆಂಕಿ ಹಚ್ಚಿಕೊಂಡು ಸಾಯ್ತೀವಿ… ಕಣ್ಣೀರಿಟ್ಟ ಮಹಿಳೆಯರು
ರೋಗನಿರೋಧಕ ಶಕ್ತಿಯು ಕಡಿಮೆಯಾಗಿರುವ ಯಾವುದೇ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್ನ ಸೋಂಕು ತಗುಲಬಹುದು ಎಂದು ನೋಡಲ್ ಅಧಿಕಾರಿ ಡಾ. ಗಗನ್ದೀಪ್ ಸಿಂಗ್ ಹೇಳಿದ್ದಾರೆ. "ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕವಲ್ಲ ಮತ್ತು ಮುಂಚಿನ ಹಂತಗಳಲ್ಲಿ ವರದಿಯಾಗಿ ರೋಗಿಗಳು ಚಿಕಿತ್ಸೆ ಪಡೆಯಲಾರಂಭಿಸಿದರೆ ಅದನ್ನು ಗುಣಪಡಿಸಬಹುದು. ಯಾವುದೇ ರೋಗಕ್ಕಾಗಿ ಅತಿಯಾದ ಸ್ಟಿರಾಯ್ಡ್ ಡೋಸ್ಗಳನ್ನು ಪಡೆದಿರುವ ವ್ಯಕ್ತಿಗಳು ಈ ಫಂಗಸ್ಗೆ ತುತ್ತಾಗಬಹುದು" ಎಂದಿದ್ದಾರೆ.
ಪಂಜಾಬ್‌ನ ಕೋವಿಡ್ ಎಕ್ಸ್‌ಪರ್ಟ್ ತಂಡದ ಮುಖ್ಯಸ್ಥ ಡಾ.ಕೆ.ಕೆ.ತಲ್ವಾರ್ ಅವರು ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟೀರಾಯ್ಡ್‌ಗಳ ಬಳಕೆಯು ಸಮಸ್ಯೆ ಉಂಟುಮಾಡುತ್ತಿರುವುದರಿಂದ ರಾಜ್ಯದಲ್ಲಿ ಪರ್ಯಾಯ ಚಿಕಿತ್ಸೆಯ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. (ಏಜೆನ್ಸೀಸ್)