ನ್ಯೂಸ್

ಪತನಗೊಂಡ ವಿಮಾನದ Black Box​​ ಪತ್ತೆ!; ದುರಂತದ ರಹಸ್ಯ ತಿಳಿಯಲು ತನಿಖೆ ಆರಂಭ

Black Box​​: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತವಾದ ಅಹಮದಾಬಾದ್​ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅಪಘಾತಕ್ಕೀಡಾದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನದ ಕಪ್ಪು ಪೆಟ್ಟಿಗೆಯನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವಿಮಾನ ಅಪಘಾತವಾದ ವೈದ್ಯಕೀಯ ಹಾಸ್ಟೆಲ್ ಕಟ್ಟಡದ ಮೇಲ್ಛಾವಣಿಯಲ್ಲಿ ತನಿಖಾ ಬ್ಯೂರೋ (ಎಎಐಬಿ) ತಂಡವು ಈ ಸಾಧನವನ್ನು ವಶಪಡಿಸಿಕೊಂಡಿದೆ. ವಿಮಾನದ ಬಾಲದ ಬಳಿ ಇರುವ ಕಿತ್ತಳೆ ಬಣ್ಣದ ಸಾಧನವು ಕನಿಷ್ಠ 265 ಜೀವಗಳನ್ನು ಬಲಿ ಪಡೆದಿರುವ ಅಪಘಾತದ ತನಿಖೆಗೆ ಸಹಾಯ ಮಾಡುತ್ತದೆ.

ಇನ್ನು ಕಪ್ಪು ಪೆಟ್ಟಿಗೆ ಹುಡುಗಾಟಕ್ಕಾಗಿ ಗುಜರಾತ್​ ಸರ್ಕಾರ 40ಕ್ಕೂ ಹೆಚ್ಚು ಅಧಿಕಾರಿಗಳ ತಂಡವನ್ನು ನೇಮಿಸಿತ್ತು. ಇದೀಗ ಬ್ಲಾಕ್​​ ಬಾಕ್ಸ್​​ ಪತ್ತೆಯಾದ ನಂತರ ಅಪಘಾತದ ಕುರಿತು ಹೆಚ್ಚಿನ ತನಿಖೆ ಆರಂಭವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಬ್ಲಾಕ್​​ ಬಾಕ್ಸ್​ ಕಾರ್ಯವೇನು..?

ವಿಮಾನ ಅಪಘಾತದ ಆಳ ತನಿಖೆ ಮಾಡಲು ಈ ಬ್ಲಾಕ್​​ ಬಾಕ್ಸ್​ ಸಹಾಯ ಮಾಡುತ್ತದೆ. ಈ ಸಾಧನವು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಅನ್ನು ಹೊಂದಿರುತ್ತದೆ. ಮೊದಲನೆಯದು ವಿಮಾನಕ್ಕೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಡೇಟಾವನ್ನು ದಾಖಲಿಸಿದರೆ, ಎರಡನೆಯದು ಇಬ್ಬರು ಪೈಲಟ್‌ಗಳ ನಡುವಿನ ಕಾಕ್‌ಪಿಟ್ ಸಂಭಾಷಣೆಯನ್ನು ಕೊನೆಯ ಕ್ಷಣದವರೆಗೆ ದಾಖಲಿಸುತ್ತದೆ.(ಏಜೆನ್ಸೀಸ್​​)