ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರು ಜೂ.21 ರಂದು ಪದಗ್ರಹಣ ಸಮಾರಂಭ ನಡೆಯಲಿದ್ದು, ಅಂದು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದರು. 
ನ್ಯೂಸ್

ಜೂ.21ಕ್ಕೆ ಬಿಕೆಹೆಚ್ ಪದಗ್ರಹಣ

Shravan Kumar Nala
ಮಂಗಳೂರು: ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರು ಜೂ.21 ರಂದು ಪದಗ್ರಹಣ ಸಮಾರಂಭ ನಡೆಯಲಿದ್ದು, ಅಂದು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಮೂಲತಃ ಜಿಲ್ಲೆಯವರಾದ ಬಿ.ಕೆ. ಹರಿಪ್ರಸಾದ್ ಅವರು ಬೆಂಗಳೂರು ದೆಹಲಿಯಲ್ಲಿ ರಾಜಕಾರಣ ಮಾಡಿದರೂ, ತಮ್ಮ ಊರಿನ ಜನರೊಂದಿಗೆ ಇಂದಿಗೂ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡಿದ ಸಂದರ್ಭ ಎಲ್ಲರನ್ನೂ ಭೇಟಿಯಾಗಿ ಹೋಗುತ್ತಾರೆ. ಅವರ ನಿಷ್ಠೆ, ಪ್ರಮಾಣಿಕತೆ, ಸಿದ್ದಾಂತಗಳಿಗೆ ಬದ್ದರಾಗಿರುವುದು ಈ ಸ್ಥಾನಕ್ಕೆ ಕೊಂಡೋಗಿದೆ ಎಂದರು.
*ಜೂ.23 ರಂದು ಮಂಗಳೂರಿನಲ್ಲಿ ಎಸ್‌ಐಆರ್ ಸಮಾವೇಶ
ಕೇಂದ್ರ ಸರ್ಕಾರ ತಿಳಿಸಿರುವಂತೆ ರಾಜ್ಯದಲ್ಲಿ 5 ಕಡೆಗಳಲ್ಲಿ ಎಸ್‌ಐಆರ್ ಸಮಾವೇಶ ನಡೆಯಲಿದ್ದು, ಜೂ.23 ರಂದು ಮಂಗಳೂರಿನಲ್ಲಿ ಮಂಗಳೂರು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾರ್ಯಕರ್ತರನ್ನು ಒಳಗೊಂಡಂತೆ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
*ರಾಜ್ಯದಲ್ಲಿ ಪಂಚ ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ
ಪ್ರನಾಳಿಕೆ ಬಿಡುಗಡೆ ಮಾಡಿ, ಚುನಾವಣೆಯಲ್ಲಿ ಗೆದ್ದು, ಕೇವಲ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ ಹೆಗ್ಗಳಿಕೆ ನಮ್ಮ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಪ್ರನಾಳಿಕೆ ಬಿಡುಗಡೆ ಮಾಡಿದಾಗಿನಿಂದ ಇಂದಿನ ತನಕ ಬಿಜೆಪಿಯವರು ಗ್ಯಾರಂಟಿ ಯೋಜನೆಗಳು ಬಿದ್ದುಹೋಗುತ್ತವೆ ಎಂದು ಹೇಳುತ್ತಿದ್ದಾರೆ, ಇಲ್ಲಿಯ ಯೋಜನೆಯನ್ನೇ ಮಾಡರಿಯಾಗಿ ಪಡೆದು, ಬೇರೆ ರಾಜ್ಯಗಳಲ್ಲಿ ಪ್ರಧಾನಿ ಮೋದಿಯೂ ಸೇರಿದಂತೆ ಇತರರು ಅನುಷ್ಠಾನ ಮಾಡಿದ್ದು, ಬಿಹಾರ ಮತ್ತು ಮಧ್ಯ ಪ್ರದೇಶದಲ್ಲಿ ಕೆಲವು ಯೋಜನೆಗಳನ್ನು ನಿಲ್ಲಿಸಿದ್ದಾರೆ. ಆದರೆ ಇಂದಿಗೂ ನಮ್ಮ ರಾಜ್ಯದಲ್ಲಿ ಯಶಸ್ವಿಯಾಗಿ ಯೋಜನೆಗಳು ಜಾರಿಯಲ್ಲಿವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕೇಂದ್ರದಲ್ಲಿ ಗ್ಯಾರಂಟಿ ಯೋಜನೆಗೆ ಹಣ ಕೇಳಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದು, ಕೇಂದ್ರದಲ್ಲಿ ನಮಗೆ ಬರುವ ಜಿಎಸ್‌ಟಿ ಹಣವನ್ನು ಅನುಪಾತದ ಆದಾರದಲ್ಲಿ ನೀಡುವಂತೆ ಮಾತ್ರ ಕೇಳಿಕೊಳ್ಳಲಾಗಿದೆ. ನಾವು ಇಲ್ಲಿ ಕೇವಲ ಮರಣ ಹೊಂದಿದವರು ಹಾಗೂ ಆದಾಯ ತೆರಿಗೆ ಕಟ್ಟಿದವರನ್ನು ಗುರುತಿಸಿ ಡಿಲಿಟ್ ಮಾಡುವ ಕೆಲಸ ಮಾತ್ರ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯಾವುದೇ ಯೋಜನೆಗಳು ನಿಲ್ಲುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಶಶಿಧರ್ ಹೆಗ್ಡೆ, ಸುಭೋದರ್ ಆಳ್ವ, ಅಪ್ಪಿ, ಅಬ್ದುಲ್ ರಹುಪ್, ಕೆ.ಕೆ. ಸಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.