ಭುವನೇಶ್ವರ್: ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಅವರು ಜಗನ್ನಾಥ ದೇವರ ಮೇಲೆ “ತಪ್ಪಾಗಿ” ಹೇಳಿಕೆ ನೀಡಿದ್ದಕ್ಕೆ ನನಗೆ ನೋವಾಗಿದೆ. ಇದರಿಂದಾಗಿ ಪಶ್ಚಾತ್ತಾಪದಿಂದ ಮೂರು ದಿನಗಳ ಕಾಲ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.
ಬಿಜೆಪಿಯ ಪುರಿ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರಾ ಅವರು ಭಗವಾನ್ ಜಗನ್ನಾಥನ ಕುರಿತು ತಪ್ಪಾಗಿ ಹೇಳಿಕೆ ನೀಡಿದ್ದಕ್ಕಾಗಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿದ ನಂತರ ಸಂಬಿತ್ ಪಾತ್ರಾ ಅವರು ಮಂಗಳವಾರದಿಂದ 3 ದಿನಗಳ ಕಾಲ ಉಪವಾಸ ಮಾಡುವ ಮೂಲಕ ತಪಸ್ಸು ಮಾಡುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮಾಡಿದ ತಪ್ಪಿಗಾಗಿ ನಾನು ಭಗವಾನ್ ಜಗನ್ನಾಥನ ಪಾದಕ್ಕೇರಗಿ ಕ್ಷಮೆಯಾಚಿಸುತ್ತೇನೆ. ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಮುಂದಿನ ಮೂರು ದಿನ ಉಪವಾಸ ಇರಲಿದ್ದೇನೆ ಎಂದು ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿರುವ ವೇಳೆ ಪುರಿ ಜಗನ್ನಾಥ ದೇವರಿ ಮೋದಿ ಭಕ್ತ ಎಂದು ಸಂಬಿತ್ ಹೇಳಿಕೆ ನೀಡಿದ್ದರು. ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ ಬಾಯಿತಪ್ಪಿ ಹೇಳಿದ್ದಾಗಿ ಸಮಾಜಾಯಿಸಿ ನೀಡಿದ್ದರು.
ಬಿಜೆಪಿ ನಾಯಕ ಸಂಬಿತ್ ಪಾತ್ರಾ ಮಾತುಗಳು ಮಾತುಗಳು ವಿವಾದವನ್ನು ಹುಟ್ಟುಹಾಕಿತು ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಖಂಡಿಸಿದ್ದರು. ಜಗನ್ನಾಥನನ್ನು ದೇಶದಲ್ಲಿ ರಾಜಕೀಯ ಭಾಷಣದಿಂದ ದೂರವಿಡುವಂತೆ ಬಿಜೆಪಿಗೆ ಮನವಿ ಮಾಡಿದದ್ದರು.
ಮಹಾಪ್ರಭು ಶ್ರೀ ಜಗನ್ನಾಥ ಬ್ರಹ್ಮಾಂಡದ ಪ್ರಭು. ಮಹಾಪ್ರಭುವನ್ನು ಇನ್ನೊಬ್ಬ ಮನುಷ್ಯನ ಭಕ್ತ ಎಂದು ಕರೆಯುವುದು ಭಗವಂತನಿಗೆ ಮಾಡಿದ ಅವಮಾನ. ಇದು ಸಂಪೂರ್ಣವಾಗಿ ಖಂಡನೀಯ. ಇದು ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಜಗನ್ನಾಥ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದೆ ಮತ್ತು ಅವಮಾನಿಸಿದೆ ಎಂದು ನವೀನ್ ಪಟ್ನಾಯಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು.